ಮಂಗಳೂರು : ತಮ್ಮ ಸಹೋದ್ಯೋಗಿಗಳಿಗೆ ಕೊರೋನಾ ಸೋಂಕು ಹರಡಿದ್ದನ್ನ ಗಮನಿಸಿದ ಪೊಲೀಸ್ ಇನ್ಸ್’ಪೆಕ್ಟರ್ ಪೊಲೀಸ್ ಸಿಬ್ಬಂದಿಗಳ ಕುಟುಂಬಕ್ಕೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಮೂಡಬಿದ್ರಿಯ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಈ ರೀತಿಯಾಗಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ. ವಿಶೇಷ ಅಂದ್ರೆ ಅವರು ನೆರವು ನೀಡಿದ್ದು ಉಳ್ಳಾಲ ಠಾಣಾ ಪೊಲೀಸ್ ಸಿಬ್ಬಂದಿಗಳ ಕುಟುಂಬಗಳಿಗೆ. ತಾನು ಮೂಡಬಿದ್ರಿ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದರೂ, ಖಾಕಿ ಯೂನಿಫಾರಂ ತೊಟ್ಟಿರುವ ಪೊಲೀಸರೆಲ್ಲರೂ ತನ್ನ ಸಹೋದ್ಯೋಗಿಗಳೆಂದು ಬಗೆದು ದಿನೇಶ್ ಕುಮಾರ್ ಮಾನವೀಯ ನೆರವು ನೀಡಿದ್ದಾರೆ. ರಾತ್ರೋ ರಾತ್ರಿ ದಿನಬಳಕೆಯ ಅಗತ್ಯ ಸಾಮಗ್ರಿಗಳನ್ನ ಮೂಟೆ ಕಟ್ಟಿಕೊಂಡು ಪಿಕಪ್ ಮೂಲಕ ಕಿಟ್ ಗಳನ್ನ ಉಳ್ಳಾಲ ಪೊಲೀಸ್ ಸಿಬ್ಬಂದಿಗಳ ಕ್ವಾಟ್ರಸ್ ಗೆ ತೆಗೆದುಕೊಂಡು ಹೋಗಿದ್ದಾರೆ. ತನ್ನ ಸ್ವಂತ ಖರ್ಚಿನಲ್ಲಿ 30 ಪೊಲೀಸ್ ಕುಟುಂಬಗಳ ಮನೆ ಬಾಗಿಲಿಗೆ ದಿನಸಿ ಕಿಟ್ ತಲುಪಿಸಿದ್ದಾರೆ. ಈಗಾಗಲೇ ಗೃಹ ರಕ್ಷಕ ಸಿಬ್ಬಂದಿಯೂ ಸೇರಿದಂತೆ ಉಳ್ಳಾಲ ಠಾಣೆಯ ಒಟ್ಟು 13 ಮಂದಿ ಆರಕ್ಷಕ ಸಿಬ್ಬಂದಿಗಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇಂತಹ ಸಮಯದಲ್ಲಿ ಹಿರಿಯ ಅಧಿಕಾರಿಗಳೇ ಅಸಹಾಯಕರಾಗಿದ್ದರೆ, ಮೂಡಬಿದ್ರಿ ಠಾಣೆಯ ಪೊಲೀಸ್ ಇನ್ಸ್’ಪೆಕ್ಟರ್ ದಿನೇಶ್ ಕುಮಾರ್ ತನ್ನ ಸಹೋದ್ಯೋಗಿಗಳ ಕುಟುಂಬಗಳಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.