ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬೆಳಗ್ಗೆಯಿಂದಲೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಲಲ್ಲೆ ಸಾಧಾರಣ ಮಳೆ ಕೂಡ ಸುರಿಯುತ್ತಿತ್ತು. ಆದರೆ, ಸಂಜೆ ವೇಳೆಗೆ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿದೆ. ಕಳೆದ ಹದಿನೈದು ದಿನಗಳಿಂದ ಸಾಧಾರಣ ಮಲೆ ಸುರಿಯುತ್ತಿತ್ತು. ಬಿಟ್ಟು ಬರುತ್ತಿದ್ದ ಮಳೆ ರೈತರಲ್ಲಿ ಸಂತಸ ಕೂಡ ತಂದಿತ್ತು. ಮಳೆ ಸಾಧಾರಣವಾಗಿ ಸುರಿದರೆ ಭೂಮಿ ನೀರನ್ನ ಹೀರಿಕೊಳ್ಳೋದ್ರಿಂದ ಅಂತರ್ಜಲ ಮಟ್ಟವೂ ಹೆಚ್ಚುತ್ತೆಂದು ಖುಷಿಯಾಗಿದ್ರು. ಆದ್ರೆ, ಸಂಜೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿರೋದ್ರಿಂದ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಮೂಡಿಗೆರೆ ಭಾಗದಲ್ಲಿ ಮಳೆರಾಯ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಚಿಕ್ಕಮಗಳೂರು ನಗರದಲ್ಲೂ ಬೆಳಗ್ಗೆಯಿಂದ ಮೋಡಕವಿದ ವಾತಾವರಣವಿದ್ದು ಆಗಾಗ್ಗೆ ಸಾಧಾರಣ ಮಳೆ ಬರ್ತಿದೆ. ಸಂಜೆ ವೇಳೆ ತುಸು ಹೆಚ್ಚಾಗೆ ಮಳೆ ಸುರಿದಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗ್ತಿರೋದ್ರಿಂದ ಜಿಲ್ಲೆಯ ಜೀವನದಿಗಳಾದ ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳ ಹರಿವಿನಲ್ಲೂ ಹೆಚ್ಚಳವಾಗಿದೆ. ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಕೆರೆ-ಕಟ್ಟೆಗಳಿಗೂ ನೀರಾಗಿದೆ. ಜಿಲ್ಲೆಯ ಮಲೆನಾಡಿನಲ್ಲಿ ಈ ವರ್ಷವೂ ಭಾರೀ ಮಳೆಯಾದ್ರೆ ನಮ್ಮ ಬದುಕೇನೆಂದು ಮಲೆನಾಡಿಗರು ಕಂಗಾಲಾಗಿದ್ದಾರೆ. ಯಾಕಂದ್ರೆ, ಕಳೆದ ವರ್ಷ ಆದ ಅನಾಹುತಗಳಿಂದ ಜನ ಹೊರಗೇ ಬಂದಿಲ್ಲ. ಹಲವರು ಸೌಲಭ್ಯ ವಂಚಿತರಾಗಿದ್ದಾರೆ. ಹಲವರಿಗೆ ಮನೆ-ಮಠ ಇಲ್ಲ. ಈಗಿರುವಾಗ ಆಗಾಗ್ಗೆ ಮತ್ತೆ ಸುರಿಯುತ್ತಿರೋ ಮಳೆ ಕಂಡು ಜನ ಕಂಗಾಲಾಗಿದ್ದಾರೆ.