ದೆಹಲಿ : ರಾಮ ಮಂದಿರ ನಿರ್ಮಾಣದ ನಂತರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂಬ RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಮೋಹನ್ ಭಾಗವತ್ರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.
ನೂತನ ಕಾಂಗ್ರೆಸ್ ಪ್ರಧಾನ ಕಛೇರಿಯಾದ ಇಂದಿರಾ ಭವನ ಉದ್ಘಾಟನೆ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾಗವತ್ ಅವರ ಹೇಳಿಕೆಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿ ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಗವಿಮಠದ ಜಾತ್ರೆಯಲ್ಲಿ ಜಿಲೇಬಿ ಹಾಕಿದ ಗವಿಶ್ರೀ : ಲಕ್ಷಾಂತರ ಭಕ್ತರಿಗೆ ದಾಸೋಹ ವ್ಯವಸ್ಥೆ !
ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ ‘ಮೋಹನ್ ಭಾಗವತ್ ಹೇಳಿರುವ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ. ಅವರು ಇಡೀ ಸಂವಿಧಾನ ಮತ್ತು ಬ್ರಿಟಿಶರ ವಿರುದ್ದ ನಡೆಸಿದ ಸ್ವಾತಂತ್ರ್ಯವನ್ನು ಅಸಿಂಧು ಎಂದು ಹೇಳಿದ್ದಾರೆ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳುವುದು ಭಾರತದ ಎಲ್ಲಾ ಸಾರ್ವಜನಿಕರಿಗೂ ಮಾಡುವ ಅವಮಾನ. ಇಂತಹ ಹೇಳಿಕೆಯನ್ನು ನೀಡಿರುವ ಮೋಹನ್ ಭಾಗವತ್ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಬೇಕು ಏಂದು ರಾಹುಲ್ ಆಗ್ರಹಿಸಿದರು.
ಏನಿದು ಮೋಹನ್ ಭಾಗವತ್ ವಿವಾದಾತ್ಮಕ ಹೇಳಿಕೆ !
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ದಿನವನ್ನು “ಭಾರತದ ನಿಜವಾದ ಸ್ವಾತಂತ್ರ್ಯ” ಎಂದು ಉಲ್ಲೇಖಿಸಿದ್ದಾರೆ. ಇಂದೋರ್‌ನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ‘ರಾಷ್ಟ್ರೀಯ ದೇವಿ ಅಹಲ್ಯಾ ಪ್ರಶಸ್ತಿ’ ಪ್ರದಾನ ಮಾಡಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ‘ ರಾಮ ಮಂದಿರದ ಪ್ರತಿಷ್ಠಾಪನೆಯ ದಿನಾಂಕವನ್ನು “ಪ್ರತಿಷ್ಠಾ ದ್ವಾದಶಿ” ಎಂದು ಆಚರಿಸಬೇಕು. ಹಲವಾರು ವರ್ಷಗಳಿಂದ ಶತ್ರುದಾಳಿಯನ್ನು ಎದುರಿಸಿದ ಭಾರತಕ್ಕೆ ರಾಮ ಮಂದಿರ ಸ್ಥಾಪನೆಯಾದ ದಿನ ನಿಜವಾದ ಸ್ವಾತಂತ್ರ್ಯ ದಿನವಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ರಾಹುಲ್ ಸೇರಿದಂತೆ ಅನೇಕರು ಮೋಹನ್ ಭಾಗವತ್ ನೀಡಿರುವ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.