ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಬೇಸಿಗೆ ವೇಳೆ ಅನೇಕ ಏರಿಯಾಗಳು ನೀರಿಗಾಗಿ ಅಕ್ಷರಶಃ ತತ್ತರಿಸಿ ಹೋಗಿದ್ದವು. ಆದಾದ ಬಳಿಕ ಎಲ್ಲಾವು ಸರಿಯಾಯ್ತು ಅನ್ನುವಾಗಲೇ ನಗರದ ಏರಿಯಾ ಒಂದರಲ್ಲಿ ವಿಚಿತ್ರ ಸಮಸ್ಯೆ ಶುರುವಾಗಿದೆ. ಇಷ್ಟು ದಿನ ನಲ್ಲಿಗಳಲ್ಲಿ ಸಾಮಾನ್ಯ ನೀರು ಬರ್ತಿತ್ತು. ಆದರೆ ಕಳೆದ ಕೆಲ ತಿಂಗಳಿನಿಂದ ಈ ಏರಿಯಾದ ಪ್ರತಿ ಮನೆಯಲ್ಲೂ ಪೆಟ್ರೋಲ್ ಮಿಶ್ರಿತ ನೀರು ಬರ್ತಿದೆ. ಅದು ಕೂಡ ಈ ಏರಿಯಾದ ಮನೆಗಳ ಸ್ವಂತ ಬೋರ್ವೆಲ್ಗಳಲ್ಲಿ.
ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿ ನಿವಾಸಿಗಳಿಗೆ ಸಂಕಷ್ಟ ಎದುರಾಗಿದ್ದು. ಕಳೆದ 6 ತಿಂಗಳಿನಿಂದ ಈ ಏರಿಯಾದ ಪ್ರತಿ ಮನೆಯ ನಲ್ಲಿಯಲ್ಲೂ ಪೆಟ್ರೋಲ್ ಮಿಶ್ರಿತ ನೀರು ಬರ್ತಿದೆ. ಅದು ಕೂಡ ಬರೊಬ್ಬರಿ 500ಕ್ಕೂ ಹೆಚ್ಚು ಮನೆಗಳಲ್ಲಿ. ಇನ್ನೂ ಈ ಬಗ್ಗೆ ಜಲಮಂಡಲಿ, ಬಿಬಿಎಂಪಿ ಅಧಿಕಾರಿಗಳಿಗೂ ಸ್ಥಳೀಯರು ದೂರು ನೀಡಿದ್ರು. ಬಳಿಕ ಈ ನೀರನ್ನ ಲ್ಯಾಬ್ ಗೆ ಕಳುಹಿಸೋದಾಗಿ ಹೇಳಿದ್ದ ಅಧಿಕಾರಿಗಳು, ಕೆಲ ದಿನಗಳ ಬಳಿಕ ಬಂದು ಮನೆಗಳಿಗೆ ಈ ಕುಡಿಯೋಕೆ ಯೋಗ್ಯ ಅಲ್ಲ ಅನ್ನೋ ಪೋಸ್ಟರ್ ಅಂಟಿಸಿ ಹೋಗಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಏನಾಗಿದೆ ಅನ್ನೋ ಉತ್ತರ ಮಾತ್ರ ಹುಡುಕಿಲ್ಲ. ಇನ್ನೂ ಈ ಬಗ್ಗೆ ಸ್ಥಳೀಯ ಶಾಸಕ ಹಾಗೂ ರಾಜ್ಯ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಗೆ ಪತ್ರ ಬರೆದು ದೂರು ನೀಡಿದ್ರು ಸರಿಮಾಡುವ ಕೆಲಸ ಮಾಡಿಲ್ಲ. ಕಳೆದ 6 ತಿಂಗಳಿನಿಂದ ಈ ನೀರು ಬಳಕೆ ಮಾಡಿದ ಅನೇಕರಿಗೆ ಚರ್ಮ ಸಮಸ್ಯೆಗಳು ಕೂಡ ಉಂಟಾಗಿದೆ ಅಂತಾರೆ ಸ್ಥಳೀಯರು.
ಇದನ್ನೂ ಓದಿ:ಅಂಗನವಾಡಿ ಶಿಕ್ಷಕಿಗೆ ಲೈಂಗಿಕ ಕಿರುಕುಳ : ಹೆಂಡತಿಯ ಮಾತು ಕೇಳಿ ಪೊಲೀಸರ ಅತಿಥಿಯಾದ ಕಿರಾತಕ !
ಇನ್ನೂ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸ್ಥಳೀಯರು ಖುದ್ದು ತಾವೇ ಖಾಸಗಿ ಲ್ಯಾಬ್ ಗೆ ನೀರನ್ನ ಕಳುಹಿಸಿ ಟೆಸ್ಟ್ ಮಾಡಿಸಿದ್ದಾರೆ. ಇದರಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1.77 ಮಿ.ಲೀಟರ್ ಪೆಟ್ರೋಲಿಯಂ ಅಂಶ ಬೆರೆತಿರೋದು ಪತ್ತೆಯಾಗಿದೆ. ಇತ್ತ ಸ್ವಂತ ಬೋರ್ ವೆಲ್ ಇದ್ದರು ಕೂಡ ಈ ನಿವಾಸಿಗಳು ಬಳಕೆ ಮಾಡೋಕೆ ಆಗದೇ ಖಾಸಗಿ ಟ್ಯಾಂಕರ್ ಗಳ ಮೊರೆ ಹೋಗಿದ್ದಾರೆ. ಕಾವೇರಿ ನೀರು ಸಂಪೂರ್ಣ ಮನೆ ಬಳಕೆ, ದೈನಂದಿಕ ಬಳಕೆಗೆ ಸಾಲದ ಕಾರಣ ಸಾವಿರಾರು ರೂಪಾಯಿಗಳನ್ನ ವ್ಯಯಿಸಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಸಮಸ್ಯೆ ಶುರುವಾಗಿ 6 ತಿಂಗಳಾದ್ರು, ಇದನ್ನ ಸಂಬಂಧಪಟ್ಟ ಇಲಾಖೆಯವರು ಸೀರಿಯಸ್ ಆಗಿ ತೆಗೆದುಕೊಳ್ಳದೇ ಇರೋದು ನಿಜಕ್ಕೂ ವಿಪರ್ಯಾಸ. ಕೂಡಲೇ ಸಮಸ್ಯೆ ಬಗೆಹರಿಯದಿದ್ದರೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ.