Wednesday, January 8, 2025

ಕೆಂಡವಾದ ಕಲಬುರಗಿ : ಪ್ರತಿಭಟನೆಗೆ ಬಂದ ಬಿಜೆಪಿಯವರಿಗೆ ಕಾಫಿ, ಟೀ ವ್ಯವಸ್ಥೆ ಮಾಡಿದ ಪ್ರಿಯಾಂಕ್​ ಖರ್ಗೆ

ಕಲಬುರಗಿ: ಬೀದರ್‌ನಲ್ಲಿ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಕೇಸರಿಪಡೆಯ ಆಕ್ರೋಶ ಭುಗಿಲೆದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಇಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಘಟಕದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ವಿಪಕ್ಷ ನಾಯಕ ಆರ್ ಅಶೋಕ್, ಸಿ.ಟಿ ರವಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಮಧ್ಯೆ ಕಾಫಿ, ಟೀ, ಎಳನೀರು ವ್ಯವಸ್ಥೆ ಮಾಡಿ ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಕೌಂಟರ್ ಕೊಟ್ಟಿದ್ದಾರೆ..

ಬೀದರ್‌ನಲ್ಲಿ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಇಂದು ಕಲಬುರಗಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿಳ್ಳಲಾಗಿದೆ. ನಗರದ ಜಗತ್ ವೃತ್ತದಲ್ಲಿ ಸಚೀನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನ ಸಮಾವೇಶ ಹಮ್ಮಿಕೊಳ್ಳಲಾಗಿತ್ತು..

ಇದನ್ನೂ ಓದಿ :ಮದುವೆ ಸಂಭ್ರಮದ ನಡುವೆ ಗ್ರಾಮದ ಶಾಲೆ ಅಭಿವೃದ್ದಿಗೆ ಮುಂದಾದ ಡಾಲಿ ಧನಂಜಯ್​ !

ಸಮಾವೇಶದ ಬಳಿಕ ವಿಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಶತ್​​ ನಾಯಕ ಛಲವಾದಿ ನಾರಾಯಣಸ್ವಾಮಿ, ಎನ್ ರವಿಕುಮಾರ್, ಸಿ.ಟಿ ರವಿ ನೇತೃತ್ವದಲ್ಲಿ ಜಗತ್ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿದರು‌‌. ಈ ವೇಳೆ ಐವಾನ್ ಏ ಶಾಹಿ ಪ್ರದೇಶದಲ್ಲಿರೋ ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಕೇಸರಿಪಡೆ ಮುಂದಾಗಿದೆ. ಈ ವೇಳೆ ಬಿಜೆಪಿ ನಾಯಕರನ್ನ ಪೊಲೀಸರು ತಡೆದಿದ್ದಾರೆ‌. ಮುಖಂಡರನ್ನ ವಶಕ್ಕೆ ಪಡೆಯುವ ವೇಳೆ ನೂಕಾಟ ತಳ್ಳಾಟ ನಡೆದಿದೆ. ಈ ವೇಳೆ ಪೊಲೀಸರು ವಿಪಕ್ಷ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ‌ಟಿ ರವಿ, ಎನ್ ರವಿಕುಮಾರ್ ಸೇರಿದಂತೆ 70 ಕ್ಕೂ ಅಧಿಕ ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್​ ಸರ್ಕಾರವನ್ನು ಕಿತ್ತೆಸೆಯಬೇಕಿದೆ ಎಂದ ಆರ್​.ಅಶೋಕ್​

ಇನ್ನೂ ಪ್ರತಿಭಟನ ಮೆರವಣಿಗೆ ಮುನ್ನ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಈ ಹಿಂದೆ ನಾವು ನಿಜಾಮರನ್ನ ಕಿತ್ತಿದ್ದೆವು. ಅದೇ ರೀತಿ ಇಂದು ಕಾಂಗ್ರೆಸ್ ಸರ್ಕಾರವನ್ನ ಕಿತ್ತೆಸೆಯಬೇಕಿದೆ ಎಂದರು. ರಾಜ್ಯದಲ್ಲಿ ಸುಸೈಡ್ ಸರ್ಕಾರವಿದ್ದು, 15 ದಿನವಾದರೂ ಸಚಿನ್ ಆತ್ಮಹತ್ಯೆಗೆ ಕಾರಣವಾದವರನ್ನ ಬಂಧಿಸದ ಸರ್ಕಾರಕ್ಕೆ ನಾಚಿಕೆಯಾಗಬೇಕು ಅಂತಾ ಕಿಡಿಕಾರಿದರು..

ಇನ್ನೂ ಇದೇ ವೇಳೆ ಮಾತನಾಡಿದ MLC ಸಿ.ಟಿ ರವಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.. ಮಲ್ಲಿಕಾರ್ಜುನ ಖರ್ಗೆಯವರೇ ನೀವು ಪುತ್ರ ವ್ಯಾಮೋಹದಿಂದ ದೃತರಾಷ್ಟ್ರವಾಗಬೇಡಿ. ನೀವು ದೃತರಾಷ್ಟ್ರವಾದರೆ ಮುಂದೊಂದು ದಿನ ಕುರುಕ್ಷೇತ್ರ ಆಗಲಿದೆ ಅಂತಾ ಕಿಡಿಕಾರಿದರು. ಕಾಂಟ್ರಾಕ್ಟರ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಒಂದು ಕ್ಷಣ ಯೋಚನೆ ಮಾಡದೇ ರಾಜೀನಾಮೆ ಕೊಟ್ಟರು. ಇದೀಗ ಸಚೀನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ನೀವು ರಾಜೀನಾಮೆ ನೀಡಬೇಕು ಅಂತಾ ಸಿ.ಟಿ ರವಿ ಆಗ್ರಹಿಸಿದರು. ಇದನ್ನೂ ಓದಿ: ಪ್ರಿಯಾಂಕ್​ ಖರ್ಗೆ ವಿರುದ್ದ ಕಾಂಗ್ರೆಸ್​ ಪಕ್ಷದಲ್ಲೆ ಷಡ್ಯಂತ್ರ ನಡೆಯುತ್ತಿದೆ : ವಿಜಯೇಂದ್ರ

ಮುತ್ತಿಗೆ ಹಾಕಲು ಬಂದವರಿಗೆ ಟೀ, ಕಾಫಿ ಮೂಲಕ ಕೌಂಟರ್ ಕೊಟ್ಟ ಕಾಂಗ್ರೆಸ್​ !

ಇನ್ನೂ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಬಿಜೆಪಿ ಮುಖಂಡರು ಮುತ್ತಿಗೆ ಹಾಕಲು ಹೋಗಿರೋದಕ್ಕೆ ಕಾಂಗ್ರೆಸ್ ಕೌಂಟರ್ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ನಿವಾಸದ ಬಳಿ ಬೆಂಬಲಿಗರು ಬಿಜೆಪಿ ಮುಖಂಡರಿಗೆ ಕೌಂಟರ್ ಕೊಡಲು ಟೀ ಕಾಫಿ, ಎಳನೀರು ವ್ಯವಸ್ಥೆ ಮಾಡಿದ್ದರು.. ಇನ್ನೂ ಕಾಂಗ್ರೆಸ್‌ನ ಈ ಕ್ರಮಕ್ಕೆ ಕೇಸರಿಪಡೆ ಸಿಡಿದೆದ್ದಿದೆ. ಪ್ರಿಯಾಂಕ್ ಖರ್ಗೆ ಅಪ್ಪನ ಭಯಕ್ಕೆ ಸಿಎಂ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದು, ನಾನು ಇವರ ಬುಡಕ್ಕೆ ಕೈಯಿಟ್ರೆ ಎಲ್ಲಿ ನನ್ನ ಬುಡಕ್ಕೆ ಕೈ ಇಡ್ತಾರೆ ಅನ್ನೊ ಕಾರಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಸಿಎಂ ಹಿಂದೆಟು ಹಾಕ್ತಿದಾರೆಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು..

ಅದೆನೇ ಇರಲಿ ಬೀದರ್‌ನಲ್ಲಿ ಗುತ್ತಿಗೆದಾರ ಸಚೀನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ರೆ, ಇತ್ತ ಕೇಸರಿಪಡೆ ಸಚೀನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು ಸುಳ್ಳಲ್ಲ..

RELATED ARTICLES

Related Articles

TRENDING ARTICLES