ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಜೀವ ಹಾನಿ ಹಾಗೂ ಬೆಳೆ ನಾಶವಾಗುತ್ತಿರುವ ಹಿನ್ನಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಲೂರು ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಅವರು ಮನವಿ ಮಾಡಿದರು. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕಾಡನೆ ಹಾವಳಿ ಕುರಿತು ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕಿನ ಕಾಫಿ ಬೆಳೆಗಾರರಿಗೆ ಮತ್ತು ರೈತರಿಗೆ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳಿಂದ ತೊಂದರೆಯಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ನೀಡುವ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕಿದೆ ಎಂದರು.
ಕಾಡಾನೆ ಹಾವಳಿ ತಪ್ಪಿಸಲು ಬ್ಯಾರಿಕೇಡ್ ನಿರ್ಮಾಣ ಹಾಗೂ ಸಕಲೇಶಪುರ ತಾಲ್ಲುಕಿನಲ್ಲಿ ಪ್ರತ್ಯೇಕ ವನ್ಯ ಜೀವಿ ಉಪ ವಿಭಾಗ ಕಚೇರಿಯನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ತಿಳಿಸಿದರು.
ಶಾಸಕರಾದ ಕೆ.ಎಸ್. ಲಿಂಗೇಶ್ ಅವರು ಮಾತನಾಡಿ ಇತ್ತೀಚೆಗೆ ಬೇಲೂರು ತಾಲ್ಲೂಕಿನ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಅನೆ ಹಾವಳಿಯಿಂದ ರೈತರ ಬೆಳೆ ನಾಶ ಮಾಡುತ್ತಿದ್ದು, ಶೀಘ್ರವಾಗಿ ಅವುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಹೇಳಿದರು.
ಕಾಡಾನೆ ಹಾವಳಿ ಹೆಚ್ಚಾಗಿರುವ ಕಾರಣ ಅವುಗಳ ಚಲನ ವಲನ ಗಮನಿಸಲು ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಬೇಲೂರು ತಾಲ್ಲೂಕಿನಲ್ಲಿ ಹೊಸದಾಗಿ ಆನೆ ಹಾವಳಿ ಪ್ರಾರಂಭವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಡಾನೆಗಳ ಕುರಿತು ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳುವಂತೆ ಅವರು ಅರಣ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಕಾಫಿ ಬೆಳೆಗಾರರು ಕಾಡಾನೆ ಹಾವಳಿಯಿಂದ ನಷ್ಟ ಅನುಭವಿಸುತ್ತಿದ್ದು, ಕಾಫಿಗೆ ಶೇ.75 ರಷ್ಟು ಪರಿಹಾರ ಧನದ ದರವನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಆನೆ ಹಾವಳಿಯಿಂದ ನಷ್ಟ ಅನುಭವಿಸಿದ ರೈತರಿಗೆ ಶೀಘ್ರವಾಗಿ ಪರಿಹಾರ ನೀಡುವಂತೆ ಹಾಗೂ ರೈತರ ಜಮೀನಿಗೆ ತೊಂದರೆಯಾಗದಂತೆ ಟ್ರೆಂಚ್ ಮಾಡಿಸುವಂತೆ ಆರ್. ಗಿರೀಶ್ ಅವರು ಅರಣ್ಯಾಧಿಕಾರಿಗಳಿಗೆ ತಿಳಿಸಿದರು.
ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಬೆಳೆ ಸಾಲ ಹಾಗೂ ಅವಧಿ ಸಾಲ ಮರುಪಾವತಿಸುವ ಗಡುವನ್ನು ಆಗಸ್ಟ್ ಅಂತ್ಯಕ್ಕೆ ಮುಂದೂಡಿದ್ದು, ಈ ವಿಷಯ ಕುರಿತು ಎಲ್ಲಾ ಬ್ಯಾಂಕ್‍ಗಳಿಗೂ ಇ-ಮೇಲ್ ಕಳುಹಿಸಿ ಮಾಹಿತಿ ನೀಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಉಪ ಅರಣ್ಯಾಧಿಕಾರಿ ಸಿವರಾಂ ಬಾಬು ಅವರು ಮಾತನಾಡಿ ಆನೆಗಳನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ಕೊಡಗು ಹಾಸನ ಗಡಿ ಭಾಗದಲ್ಲಿ ಪೂರ್ಣ ಬ್ಯಾರಿಕೇಡ್ ಹಾಕಿ ಆನೆಗಳನ್ನು ಸ್ಥಳಾಂತರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಬೆಳಿಗ್ಗೆ ಮತ್ತು ಸಂಜೆ ಡೈರಿಗೆ ಹಾಲು ಹಾಕಲು ಹೋಗುತ್ತಾರೆ ಹಾಗೂ ಮಕ್ಕಳು ಶಾಲೆಗೆ ಓಡಾಡುತ್ತಾರೆ ಹಾಗಾಗಿ ಆನೆ ಹಾವಳಿ ಇರುವ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಹೆಚ್ಚಾಗಿ ಅಳವಡಿಸುವಂತೆ ಟಾಸ್ಕ್ ಫೋರ್ಸ್ ಸದಸ್ಯರು ಹಾಗೂ ಕಾಫಿ ಬೆಳೆಗಾರರು ಹಾಗೂ ರೈತರು ಮನವಿ ಮಾಡಿದರು.
ಆನೆ ಹಾವಳಿ ತಡೆಯಲು ಸೋಲಾರ್ ಬೇಲಿ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಹಾಗೂ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದರು.
ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ಅರಣ್ಯ ಇಲಾಖೆ ಅಧಿಕಾರಿಗಳು, ಟಾಸ್ಕ್ ಫೋರ್ಸ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಫಿ ಬೆಳಗಾರರು ಹಾಗೂ ರೈತರು ಸಭೆಯಲ್ಲಿ ಹಾಜರಿದ್ದರು.