ಮಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿರುವ ಲಕ್ಷ್ಮೀ ಹೆಸರಿನ ಆನೆಯು ಹೆಣ್ಣು ಮರಿಗೆ ಜನ್ಮ ನೀಡಿದೆ. 20 ತಿಂಗಳ ಗರ್ಭಾವಸ್ಥೆ ಬಳಿಕ ಮುದ್ದಾದ ಹೆಣ್ಣಾನೆಗೆ ಲಕ್ಷ್ಮೀಯು ಜನ್ಮ ನೀಡಿದ್ದಾಳೆ. ಮರಿ ಆನೆ ಹಾಗೂ ತಾಯಿ ಆನೆ ಎರಡೂ ಆರೋಗ್ಯವಂತವಾಗಿದ್ದು, ಸೂಕ್ತ ಸಮಯಕ್ಕೆ ಅದಕ್ಕೆ ಬೇಕಾದ ಆಹಾರ ಹಾಗೂ ಚಿಕಿತ್ಸೆಗಳನ್ನ ಒದಗಿಸಲಾಗುತ್ತಿದೆ. ಧರ್ಮಸ್ಥಳ ಪಶು ವೈದ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಿಗಾದಲ್ಲಿ ಲಕ್ಷ್ಮೀಗೆ ಸುಸೂತ್ರವಾಗಿ ಹೆರಿಗೆ ಆಗಿದೆ. ಲಕ್ಷ್ಮೀಯನ್ನ ಎರಡು ವರುಷದ ಹಿಂದೆ ಆನೆಗಳ ಸಂತಾನೋತ್ಪತ್ತಿ ಉದ್ದೇಶದಿಂದ ಬನ್ನೇರುಘಟ್ಟಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಲಕ್ಷ್ಮೀ, ಹೆಣ್ಣು ಮರಿಗೆ ಜನ್ಮ ನೀಡಿದ್ದು ಐತಿಹಾಸಿಕ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಅತಿಥಿ ಆಗಮಿಸಿದಂತಾಗಿದೆ.