ಶಿವಮೊಗ್ಗ : ಈ ದೇವರನ್ನು ಒಲಿಸಿಕೊಳ್ಳಲು ಭಕ್ತರು ಹಲವಾರು ಮಾರ್ಗಗಳನ್ನು ಅನುಸರಿಸ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕಿ.ಮೀ. ಗಟ್ಟಲೇ ದೂರ ಪಯಣಿಸುತ್ತಾರೆ. ಇಲ್ಲವೇ, ದೂರದಲ್ಲೇ ವಿಶೇಷ ಪೂಜೆಯನ್ನ ನೆರವೇರಿಸಿ ತಮ್ಮ ಬೇಡಿಕೆ ಈಡೇರಿಸಪ್ಪಾ ಅಂತಾ ದೇವರ ಬಳಿ ಬೇಡಿಕೊಳ್ತಾರೆ. ಆದ್ರೆ ಇಲ್ಲಿ, ಭಕ್ತರು ಮಾಡಿದ್ದೇ ವಿಶೇಷವಾಗಿದೆ. ದೂರದಲ್ಲಿರುವ ದೇವರ ಬಳಿ ಹೋಗಲಾಗದೇ, ಮೈಲಿಗಲ್ಲಿಗೆ ದೇವರೆಂದು ಭಾವಿಸಿ, ಪೂಜೆ ನೆರವೇರಿಸಿ, ಊದಿನಕಡ್ಡಿ, ಕರ್ಪೂರ ಬೆಳಗಿ, ಕಾಯಿ ಹೊಡೆದು, ನಿಂಬೆ ಹಣ್ಣು ಇಟ್ಟು ಪೂಜೆ ನೆರವೇರಿಸಿದ್ದಾರೆ. ಹೌದು, ಇದು ಆಶ್ಚರ್ಯವಾದರೂ ಸತ್ಯ. ಅಂದಹಾಗೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಳಿ ಇರುವ ಹಣಗೆರೆ ಕಟ್ಟೆ, ಇದು ಮಲೆನಾಡಿನ ಭಾವೈಕ್ಯತೆಯ ಕೇಂದ್ರವಾಗಿದೆ. ಹಜರತ್ ಸಯಿದ್ ಸಾದತ್ ದರ್ಗಾ ಮತ್ತು ಭೂತಪ್ಪ-ಚೌಡಿಯ ದೇವಾಲಯಗಳು ಒಟ್ಟಿಗೆ ಇದೆ. ಇದು ವಿಶೇಷದಲ್ಲಿ ವಿಶೇಷವಾಗಿದ್ದು, ಇಂತಹ ಸೌಹಾರ್ಧ ಕೇಂದ್ರವಾಗಿರುವ ಇಲ್ಲಿ ಕಳೆದ ಮೂರು ತಿಂಗಳಿನಿಂದ ಪೂಜೆ ಪುನಸ್ಕಾರಕ್ಕೆ ನಿಷೇಧ ಹೇರಲಾಗಿದೆ. ಆದರೆ, ಭಕ್ತರು ಮಾತ್ರ ತಮ್ಮ ಇಷ್ಟಾರ್ಥದ ನೆರವೇರಿಕೆಗೆ ದೂರದಿಂದಲೇ, ಭಕ್ತಿ ಸಮರ್ಪಿಸುತ್ತಿದ್ದಾರೆ. ಅಂದಹಾಗೆ, ಈ ದೇವಾಲಯಕ್ಕೆ ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಿದ್ದು, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು, ಸಾವಿರಾರು ಜನ ಭಕ್ತರು ಇಲ್ಲಿಗೆ ಆಗಮಿಸ್ತಾರೆ. ಆದ್ರೆ ಕೊರೊನಾ ಕಾಟದಿಂದಾಗಿ ಕಳೆದ ಮೂರು ತಿಂಗಳಿನಿಂದ ಈ ದೇವಾಲಯಕ್ಕೆ ಎಂಟ್ರಿ ನಿಷೇಧಿಸಲಾಗಿದ್ದು, ಭಕ್ತರು ಬಂದು, ಮೈಲಿಗಲ್ಲಿಗೆ ಮತ್ತು ರಸ್ತೆ ಪಕ್ಕದ ಕಟ್ಟೆಗೆ ಪೂಜೆ ನೆರವೇರಿಸುತ್ತಿದ್ದಾರೆ. ಇದನ್ನ ಕಂಡ ಇಲ್ಲಿನ ಸ್ಥಳಿಯರು, ಹೌಹಾರಿದ್ದು, ಭಕ್ತರ ಮೂಢನಂಬಿಕೆ ಇನ್ನೆಲ್ಲಿ ಹೋಗಿ ನಿಲ್ಲುತ್ತೋ..!? ಎಂಬುದು ತಿಳಿಯದಾಗಿದೆ. ಸೋಂಕು ಹರಡುವ ಭೀತಿಯಿಂದ ಈ ದರ್ಗಾಕ್ಕೆ ನೋ ಎಂಟ್ರಿ ಬೋರ್ಡ್ ಹಾಕಲಾಗಿದ್ದು, ಹೀಗಾಗಿ ದೇವರನ್ನು ಒಲಿಸಿಕೊಳ್ಳಲು ಭಕ್ತರು ಕಂಡುಕೊಂಡ ಮಾರ್ಗ ಕಂಡ ಜನರು ಬೆಸ್ತು ಬಿದ್ದಿದ್ದಾರೆ.