ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ ಮೂರು ದಿನಗಳ ಕಾಲ ಸಕ್ಕರೆ ನಗರಿ ಮಂಡ್ಯದಲ್ಲಿ ನಡೆಯುತ್ತಿದೆ. ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ನಡೆಯುತ್ತಿರುವ ನುಡಿಜಾತ್ರೆಯನ್ನ ಸಾಕಷ್ಟು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಮಂಡ್ಯ ಜಿಲ್ಲಾಡಳಿತ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಹಬ್ಬದ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಹೌದು ಈ ಬಾರಿ ಸಕ್ಕರೆ ನಗರಿ ಮಂಡ್ಯದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ ಮೂರು ದಿನಗಳ ಕಾಲ ನಡೆಯುತ್ತಿದೆ. ಇಂತಹ ನುಡಿಜಾತ್ರೆ ಈ ಬಾರಿ ಅತೀ ಹೆಚ್ಚು ಕನ್ನಡವನ್ನೇ ಮಾತನಾಡುವ ಸಕ್ಕರಿನಗರಿ ಮಂಡ್ಯದಲ್ಲಿ ಆಯೋಜನೆ ಮಾಡಲಾಗಿದೆ. ಈ ನುಡಿಜಾತ್ರೆಯನ್ನ ಸಾಕಷ್ಟು ಅರ್ಥಪೂರ್ಣವಾಗಿ ನಡೆಸಲು ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಡ್ಯ ಜಿಲ್ಲಾಡಳಿತ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.
ಹೇಗಿದೆ ಗೊತ್ತಾ ಆಯೋಜನೆ !
ಮಂಡ್ಯ ಹೊರವಲಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಸುಮಾರು 70 ಎಕರೆ ಪ್ರದೇಶದಲ್ಲಿ ನುಡಿಹಬ್ಬವನ್ನ ಆಚರಣೆ ಮಾಡಲು ತಯಾರಿ ಕೂಡ ನಡೆದಿದೆ. ಅಲ್ಲದೇ ಈಗಾಗಲೇ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು. ಚನ್ನಬಸಪ್ಪ ಅವರನ್ನ ಕೂಡ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೆ.ಆರ್. ಎಸ್ ಜಲಾಶಯದ ಮಾದರಿಯಲ್ಲಿ ಪ್ರವೇಶ ದ್ವಾರವನ್ನ ನಿರ್ಮಾಣ ಮಾಡಿದರೆ. ಇನ್ನು ಬೃಹತ್ ಪ್ರಧಾನ ವೇದಿಕೆಯನ್ನ ನಿರ್ಮಾಣ ಮಾಡಲಾಗಿದೆ.
ಪ್ರಧಾನ ವೇದಿಕೆಗೆ ರಾಜಮಾತೆ ಕೆಂಪ್ಪನಂಜಮ್ಮಣಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ. ಅಲ್ಲದೆ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಮಹಾ ಮಂಟಪ ಕೂಡ ನಿರ್ಮಾಣ ಮಾಡಲಾಗಿದೆ. ಇನ್ನು 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿಚಾರ ಗೋಷ್ಠಿಗಾಗಿ ಎರಡು ಸಮಾನಾಂತರ ವೇದಿಕೆಯನ್ನ ಸಹ ನಿರ್ಮಾಣ ಮಾಡಲಾಗಿದೆ.
ನಾಳೆ ಬೆಳಗ್ಗೆ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರನ್ನ ಮಂಡ್ಯದ ಸರ್ ಎಂ ವಿ ಪ್ರತಿಮೆ ಮುಂಭಾಗದಿಂದ ಸಾಹಿತ್ಯ ಸಮ್ಮೇಳನದ ಸ್ಥಳದವರೆಗೂ ಬೃಹತ್ ಮೆರವಣಿಗೆಯಲ್ಲಿ ಕರೆದುಕೊಂಡ ಬರಲಾಗುತ್ತದೆ. ಇನ್ನು ಬೆಳಗ್ಗೆ 11 ಗಂಟೆ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್, ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸೇರಿ ಅನೇಕ ಸಚಿವರು ಕೂಡ ಭಾಗಿಯಾಗಲಿದ್ದಾರೆ.
ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಮಂಡ್ಯ !
ಇನ್ನು ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಸಕ್ಕರಿನಗರಿ ಮಂಡ್ಯ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಅಲ್ಲದೆ ನಗರದಾದ್ಯಂತ ದಸರ ಮಾದರಿಯಲ್ಲಿ ಲೈಟಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನು ಸಾಹಿತ್ಯಸಕ್ತರಿಗಾಗಿ 450 ಪುಸ್ತಕ ಮಳಿಗೆಗಳು ಹಾಗೂ 350 ವಾಣಿಜ್ಯ ಮಳಿಗೆಯನ್ನ ನಿರ್ಮಾಣ ಮಾಡಲಾಗಿದೆ. ನುಡಿಹಬ್ಬಕ್ಕೆ ಲಕ್ಷಾಂತರ ಜನರು ಭಾಗಿಯಾಗುವ ಹಿನ್ನೆಲೆಯಲ್ಲಿ ಬಗೆ ಬಗೆಯ ಖಾದ್ಯಗಳನ್ನ ಕೂಡ ತಯಾರಿ ಮಾಡಲಾಗಿದೆ.
ಸಿದ್ದವಾಗಿದೆ ಬಗೆಬಗೆಯ ಖಾದ್ಯಗಳು !
ಉಪಹಾರ ಹಾಗೂ ಊಟಕ್ಕಾಗಿ 150 ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಒಂದೇ ಮೆನು ಮಾಡಲಾಗಿದೆ. ಇನ್ನು ಡಿಸೆಂಬರ್ 20 ರಂದು ಮೊದಲ ದಿನ ತಿಂಡಿಗೆ ತಟ್ಟೆ ಇಡ್ಲಿ, ವಡೆ, ಚಟ್ನಿ, ಸಾಂಬರ್, ಉಪ್ಮ, ಮೈಸೂರು ಪಾಕ್ ಇರಲಿದ್ದು, ಮಧ್ಯಾಹ್ನ ಉಪಹಾರವಾಗಿ ಕಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಚಟ್ನಿಪುಡಿ, ಮೆಂತ್ಯ ಬಾತ್, ಅನ್ನ, ಮೊಳಕೆ ಕಾಳು ಸಾಂಬರ್, ಬಾಳೆಹಣ್ಣು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಲಾಡ್ ಇರಲಿದೆ.
ಇನ್ನು ರಾತ್ರಿ ಉಪಹಾರಕ್ಕೆ ಪೂರಿಸಾಗು, ಮೈಸೂರು ಪಾಕ್, ಅವರೆ ಕಾಳು ಬಾತ್, ರೈತಾ, ಮೊಸರು, ಬಾಳೆಹಣ್ಣು, ಕೋಸಂಬರಿ, ಪಲ್ಯ, ಉಪ್ಪಿನಕಾಯಿ, ಹಪ್ಪಳ, ಸಾಲಡ್ ಇರಲಿದ್ದು ಈಗಾಗಲೇ ನೂರಾರು ಬಾಣಸಿಗರು ಅಡುಗೆ ತಯಾರಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ದಕ್ಷಿಣ ವಲಯ ಡಿಐಜಿ ಡಾ ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.
ಪೊಲೀಸ್ ಬಿಗಿ ಭದ್ರತೆ !
14 ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. 4-Sp, 6-Asp, 21-Dsyp, 63-Pi, 190-Psi, 215-Asi, 1700-Hc,pc, 165-ಮಹಿಳಾ ಪೇದೆ, 1000-ಗೃಹರಕ್ಷಕ ದಳ, 12-KSRP, 13-DAR ಸೇರಿ ನಾಲ್ಕು ಸಾವಿರ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ.
ಅಲ್ಲದೇ ಇಪ್ಪತ್ತು ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಎಕ್ಸ್ಪ್ರೆಸ್ ವೇ ನಲ್ಲಿ ಮಾರ್ಗ ಬದಲಾವಣೆ ಕೂಡ ಮಾಡಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಉಚಿತ ಬಸ್ ಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಜೊತೆಗೆ ಇದೇ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ನಾಳೆ ನಾಡಿದ್ದು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.