Wednesday, December 18, 2024

ಕೊಪ್ಪಳದಲ್ಲಿ ಮತ್ತೊಂದು ಅಣುಸ್ಥಾವರ ಸ್ಥಾಪನೆ : ಸ್ಥಳೀಯರಿಂದ ಭಾರಿ ವಿರೋಧ !

ಕೊಪ್ಪಳ: ಕರ್ನಾಟಕದಲ್ಲಿ ಇನ್ನೊಂದು ಅಣುಸ್ಥಾವರ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಸ್ಥಳ ಹುಡುಕಾಟ ನಡೆಸಿದ್ದು. ಸದ್ಯ ಕೊಪ್ಪಳ ತಾಲೂಕಿನ ಅರಸಿಕೇರಿ ಗ್ರಾಮದಲ್ಲಿ ಅಣುಸ್ಥಾವರ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಜಾಗ ಆಯ್ಕೆ ಮಾಡಿಕೊಂಡಿದೆ ಎಂದು ಮಾಹಿತಿ ದೊರೆತಿದೆ.

ಅಣು ಸ್ಥಾವರ ಸ್ಥಾಪನೆಗೆ 1,200 ಎಕರೆ ಜಾಗ ಬೇಕಾಗಿದ್ದು, ಸದ್ಯ 615 ಎಕರೆ ಲಭ್ಯವಿದೆ. ಇನ್ನುಳಿದ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೇಂದ್ರದಿಂದ ಸೂಚನೆ ಬಂದಿದೆ. ಈ ಭಾಗದಲ್ಲಿ ಹೆಚ್ಚಿನ ಕಾಡು ಪ್ರಾಣಿಗಳು ವಾಸ ಸ್ಥಾನವಾಗಿದೆ. ಕರಡಿ, ಜಿಂಕೆ, ಮೊಲ, ಕತ್ತೆ ಕಿರುಬ ಸೇರಿ ಹಲವು ಪ್ರಾಣಿಗಳು ವಾಸ ಮಾಡುತ್ತಿದೆ.

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಾಗದ ಪೈಕಿ ಶೇ.90ರಷ್ಟು ಸರ್ಕಾರಿ ಭೂಮಿಯೇ ಇರುವ ಪ್ರದೇಶವಾಗಿದ್ದು, ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಅರಣ್ಯ ಪ್ರದೇಶದಲ್ಲಿಯೇ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಹಾಗೂ ಅಪಾಯಕಾರಿಯಾಗಿರುವ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಮುಂದಾಗಿರುವುದು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ಈಗಾಗಲೇ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ. ಬಳಿಕ ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯನ್ನು ಸ್ಥಾವರಕ್ಕಾಗಿ ಗುರುತಿಸಲಾಗಿತ್ತು. ಆದರೆ ಇದೀಗ ಕೊಪ್ಪಳ ಹೆಚ್ಚು ಸೂಕ್ತ ಎನ್ನುವ ಕಾರಣಕ್ಕೆ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಸರ್ವೇ ಮಾಡುವ ಕಾರ್ಯಕ್ಕೆ ಕಂದಾಯ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಸರ್ವೇ ನಡೆಸಿ, ಕೇಂದ್ರಕ್ಕೆ ವರದಿ ನೀಡಲಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES