ಚಿಕ್ಕಮಗಳೂರು : ಆಟವಾಡುತ್ತಿದ್ದ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ನಡೆದಿದ್ದು. ಮಧ್ಯಪ್ರದೇಶ ಮೂಲದ ಸುನೀತಾ ಎಂಬುವವರ ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ . ಮೃತ ಮಕ್ಕಳನ್ನು 2 ವರ್ಷದ ರಾಧಿಕ ಮತ್ತು 6 ವರ್ಷದ ಸೀಮಾ ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶ ಮೂಲದವರಾದ ಸುನೀತಾ ಅಲ್ಲಿಂದ ವಲಸೆ ಬಂದು ಚಿಕ್ಕಮಗಳೂರಿನ, ಕೊಪ್ಪ ತಾಲ್ಲೂಕಿನ ಅಮ್ಮಡಿ ಎಸ್ಟೇಟ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ತೋಟದ ಮನೆಯಲ್ಲಿ ವಾಸವಾಗಿದ್ದ ಸುನೀತಾ ಮತ್ತು ಕುಟುಂಬಸ್ಥರು ಅಲ್ಲಿಯೆ ಕೂಲಿ ಕೆಲಸ ಮಾಡಿಕೊಂಡಿದ್ದರು.
ಪ್ರತಿದಿನದಂತೆ ಸುನೀತಾ ಮಕ್ಕಳನ್ನು ಮನೆಯಲ್ಲೆ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಕೆಲಸದಿಂದ ಮನೆಗೆ ಬಂದು ಮಕ್ಕಳನ್ನು ಹುಡುಕಿದಾಗ ಮಕ್ಕಳು ಇಲ್ಲದೆ ಇರುವುದನ್ನು ಕಂಡು ಗಾಬರಿಯಾಗಿದ್ದಾರೆ. ಮಹಿಳೆಯ ರೋದನೆಯನ್ನು ಕಂಡ ಕಾರ್ಮಿಕರು ಮಕ್ಕಳನ್ನು ಹುಡಿಕಾಡಿದ್ದಾರೆ. ಈ ವೇಳೆ ಮಕ್ಕಳ ಮೃತದೇಹಗಳು ಬಾವಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕೊಪ್ಪ ಪೋಲಿಸರು ಬಂದು ಪರಿಶೀಲನೆ ನಡೆಸಿದ್ದು. ಮಕ್ಕಳನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.