ಆತಿಥೇಯ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ‘ಐಸಿಸಿ ಚಾಂಪಿಯನ್‌ಷಿಪ್’ ಏಕದಿನ ಪಂದ್ಯದಲ್ಲಿ ಭಾರತ ತಂಡ ಕೇವಲ 100 ರನ್ ಗಳಿಸಿ ಆಲೌಟ್ ಆಗಿದೆ. ಭಾರತ ಕ್ರಿಕೆಟ್ ತಂಡ ಇಲ್ಲಿನ ಅಲನ್ ಬಾರ್ಡರ್ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ.
ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂದಾನ (8 ರನ್) ಹಾಗೂ ಪ್ರಿಯಾ ಪೂನಿಯಾ (3 ರನ್) ತಂಡದ ಮೊತ್ತ 23 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 3ನೇ ಕ್ರಮಾಂಕದಲ್ಲಿ ಆಡಿದ ಹರ್ಲಿನ್ ಡಿಯೋಲ್ (19 ರನ್) ಮತ್ತು ಮಧ್ಯಮ ಕ್ರಮಾಂಕದ ಮೂವರು ಎರಡಂಕಿ ಮೊತ್ತ ಗಳಿಸಿದರೂ, ದೊಡ್ಡ ಇನಿಂಗ್ಸ್ ಕಟ್ಟಲು ವಿಫಲರಾದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ ಆಟ 17 ರನ್‌ಗೆ ಕೊನೆಗೊಂಡರೆ, ಜೆಮಿಮಾ ರಾಡ್ರಿಗಸ್ 23 ರನ್ ಮತ್ತು ರಿಚಾ ಘೋಷ್ 14 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ, ಟೀಂ ಇಂಡಿಯಾ 34.2 ಓವರ್‌ಗಳಲ್ಲೇ ಅಲ್ಪ ಮೊತ್ತಕ್ಕೆ ಕುಸಿಯಿತು. ಆತಿಥೇಯ ತಂಡದ ಪರ ವೇಗಿ ಮೆಗನ್ ಶುಟ್ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದರೆ, ಕಿಮ್ ಗರ್ತ್, ಅಶ್ಲೇ ಗಾರ್ಡನರ್, ಅನ್ನಾಬೆಲ್ ಶುಥರ್‌ಲ್ಯಾಂಡ್ ಹಾಗೂ ಅಲನಾ ಕಿಂಗ್ ತಲಾ ಒಂದೊಂದು ವಿಕೆಟ್ ಕಿತ್ತರು.
ಭಾರತದ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ನಡೆಸಲು, ಐಸಿಸಿ ಚಾಂಪಿಯನ್‌ಷಿಪ್ ಉತ್ತಮ ವೇದಿಕೆಯಾಗಿದೆ. ವಿಶ್ವಕಪ್‌ನ ಅತಿಥ್ಯ ವಹಿಸಿರುವ ಭಾರತ ಸೇರಿದಂತೆ, ಚಾಂಪಿಯನ್‌ಷಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವ ಐದು ತಂಡಗಳು ವಿಶ್ವಕಪ್‌ಗೆ ನೇರವಾಗಿ ಪ್ರವೇಶ ಪಡೆಯಲಿವೆ. ಭಾರತಕ್ಕೆ ನೇರವಾಗಿ ವಿಶ್ವಕಪ್ ಟಿಕೆಟ್ ಸಿಗಲಿದೆಯಾದರೂ, ಎಲ್ಲ ವಿಭಾಗಗಳಲ್ಲಿ ಸುಧಾರಿಸಿಕೊಳ್ಳಲು ಅವಕಾಶವಿದೆ.
ಬ್ಯಾಟಿಂಗ್ ಕ್ರಮಾಂಕ ಸಂಯೋಜನೆಗೆ ತಂಡ ಒತ್ತುಕೊಡಬೇಕಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಇತ್ತೀಚೆಗೆ ನಡೆದಿದ್ದ ಟೂರ್ನಿಯಲ್ಲಿ ಕೌರ್ ಬಳಗ 2-1 ಅಂತರದ ಗೆಲುವು ಪಡೆದಿತ್ತು. ಆದರೂ, ಬ್ಯಾಟಿಂಗ್ ವಿಭಾಗದಲ್ಲಿ ಸ್ಥಿರತೆ ಕಂಡುಕೊಂಡಿಲ್ಲದಿರುವುದು ಕಳವಳದ ಸಂಗತಿ. ಅನುಭವಿ ಆಟಗಾರ್ತಿ ಶಫಾಲಿ ವರ್ಮಾ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಹಾಗಾಗಿ, ಅವರನ್ನು ಆಸಿಸ್ ಎದುರಿನ ಮೂರು ಪಂದ್ಯಗಳ ಸರಣಿಗೆ ಕೈಬಿಡಲಾಗಿದೆ.