ರಾಂಚಿ : ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೋರೆನ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೆ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಿರುವ ಕಲ್ಲಿದ್ದಲು ಬಾಕಿ ಮೊತ್ತ ₹1.36 ಲಕ್ಷ ಕೋಟಿ ಪಡೆಯಲು ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಮಂತ್ ಸೋರೆನ್ ಹೇಳಿದ್ದಾರೆ.
ಸೋರೆನ್ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ನಡೆದ ಕ್ಯಾಬಿನಟ್ ಸಭೆಯಲ್ಲಿ ಕೇಂದ್ರದ ವಿರುದ್ಧದ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಚುನಾವಣೆ ಪೂರ್ವದಲ್ಲಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಸೋರೆನ್ ‘ಪ್ರಧಾನಿ ಮತ್ತು ಗೃಹ ಸಚಿವರು ಜಾರ್ಖಂಡ್ ರಾಜ್ಯಕ್ಕೆ ಬರುತ್ತಿದ್ದಾರೆ. ಬಾಕಿ ಇರುವ 1.36 ಲಕ್ಷ ಕೋಟಿ ಬಿಡುಗಡೆ ಮಾಡಿ ಎಂದು ನಾನು ಮತ್ತೊಮ್ಮೆ ಕೈ ಮುಗಿದು ನಿಮ್ಮನ್ನು ವಿನಂತಿಸುತ್ತೇನೆ. ಈ ಮೊತ್ತ ರಾಜ್ಯಕ್ಕೆ ಅತ್ಯಂತ ಮುಖ್ಯವಾಗಿದೆ’ ಎಂದು ಹೇಳಿದ್ದರು. ಮುಂದುವರೆದು ‘ನಾನು ನನ್ನ ಬಿಜೆಪಿ ಸಂಸದರಿಗೆ ನಮ್ಮ ಬಾಕಿ ಹಣವನ್ನು ಪಡೆಯಲು ಸಹಾಯ ಮಾಡಲು ವಿನಂತಿಸುತ್ತೇನೆ’ ಎಂದು ಪ್ರಧಾನಿಗೆ ಬರೆದ ಪತ್ರದ ಪ್ರತಿಯನ್ನು ಹಂಚಿಕೊಂಡು ಸೋರೆನ್ ಪೋಸ್ಟ್ ಮಾಡಿದ್ದರು. ಇದೀಗ ಸೋರೆನ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.