ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದ ಬನ್ನಿಕಾಳಮ್ಮನ ಗುಡಿಯ ಬಳಿ ಕಲ್ಯಾಣ ಚಾಲುಕ್ಯರ 2 ಶಾಸನಗಳು ಪತ್ತೆಯಾಗಿವೆ. ಈ ಎರಡು ಶಾಸನಗಳು ಕಲ್ಲಿನ ಶಾಸನಗಳಾಗಿದ್ದು, ಕಲ್ಯಾಣ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕ್ರಿ.ಶ.1084 ಹಾಗೂ 1096 ರ ಕಾಲಕ್ಕೆ ಸೇರಿದವುಗಳಾಗಿವೆ ಎನ್ನಲಾಗಿದೆ.
ಒಂದನೇ ಶಾಸನವು ಕ್ರಿ.ಶ 1084 ಕ್ಕೆ ಸೇರಿದ್ದಾಗಿದೆ. ಕಲ್ಮನೆಯ ಮಲ್ಲಿಕಾರ್ಜುನ ದೇವರಿಗೆ ದಾನ ಬಿಟ್ಟ ವಿಷಯವಿದ್ದು, ಶಾಸನದ ಮೇಲ್ಬಾಗದಲ್ಲಿ ಸೂರ್ಯ ಚಂದ್ರ. ಲಿಂಗ ಪೂಜೆ ಮಾಡುತ್ತಿರುವ ಯತಿ, ನೀರಿನ ಕೊಡ, ಹಸು ಮತ್ತು ಕರುವಿನ ಉಬ್ಬು ಶಿಲ್ಪ ಇದೆ. ಸಂಕಗೊಣ್ಣನ ಹೆಂಡತಿ ಬೆಳೆಂಬೆ ಭೂಮಿ ದಾನ ನೀಡಿದ ವಿಷಯ ಇದರಲ್ಲಿ ಉಲ್ಲೇಖವಾಗಿದೆ.*
ಎರಡನೇ ಶಾಸನವು 18 ಸಾಲುಗಳಿಂದ ಕೂಡಿದೆ. ಕಲ್ಯಾಣ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕ್ರಿ.ಶ 1096 ಕ್ಕೆ ಸೇರಿದ ಶಾಸನವಾಗಿದ್ದು, ಇದರ ಮೇಲ್ಬಾಗದಲ್ಲೂ ಶಿವಲಿಂಗ ಮತ್ತು ಹಸು ಚಿತ್ರ ಇದೆ. ಇದು ಬಹಳ ಸವೆದಿದೆ. ಇಲ್ಲಿನ ಬೆಟ್ಟೇಶ್ವರ ದೇವರ ನಂದಾ ದೀಪಕ್ಕೆ 5 ಗದ್ಯಾಣ ದಾನ ಬಿಡಲಾಗಿದೆ. ಈ ಶಾಸನದಲ್ಲಿ ಕಲ್ಮನೆ ಗ್ರಾಮದ ಹೆಸರು ಕಲ್ಸಲವಾನಿ ಎಂದು ಉಲ್ಲೇಖವಾಗಿದೆ.