ಉತ್ತರ ಪ್ರದೇಶ: ಆಗ್ರಾ-ಲಕ್ಟೋ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ವೈದ್ಯರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಮೃತರನ್ನು ಆಗ್ರಾದ ಡಾ.ಅನಿರುದ್ ವರ್ಮಾ (29), ಡಾ.ಸಂತೋಷ್ ಕುಮಾರ್ ಮೌರ್ಯ (46), ಡಾ.ಅರುಣ್ ಕುಮಾರ್ (34), ಡಾ.ನಾರ್ದೇವ್ (35) ಮತ್ತು ರಾಕೇಶ್ ಕುಮಾರ್ (38) ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಉತ್ತರ ಪ್ರದೇಶದ ಸೈಫೈನಲ್ಲಿರುವ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಬೇತಿ ಪಡೆದ ವೈದ್ಯರಾಗಿದ್ದಾರೆ ಎನ್ನಲಾಗಿದೆ. ಆರು ಮಂದಿಯಿದ್ದ ವೈದ್ಯರ ತಂಡ ಲಕ್ಕೋದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಆಗ್ರಾಕ್ಕೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದ್ದು ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ಕಾರು ಡಿವೈಡರ್‌ಗೆ ಏರಿ ಇನ್ನೊಂದು ಬದಿಯ ಹೈವೇಗೆ ದಾಟಿದ ಪರಿಣಾಮ ಎದುರಿನಿಂದ ಬಂದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಪಘಾತದ ಕುರಿತು ತನಿಖೆ ನಡೆಯುತ್ತಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಡಾ.ಪ್ರಿಯಾಂಕಾ ಬಾಜಪೇಯ್ ತಿಳಿಸಿದ್ದಾರೆ.