ದೆಹಲಿ : ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಹೀನಾಯವಾಗಿ ಸೋತ ಬೆನ್ನಲ್ಲೇ ಇವಿಎಂಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇವಿಎಂಗಳನ್ನು ನಿಷೇಧಿಸಿ ಪೇಪರ್ ಬ್ಯಾಲೆಟ್ ಅನ್ನು ಜಾರಿಗೊಳಿಸುವಂತೆ ಆಗ್ರಹಿಸಲಾಗುತ್ತಿದೆ. ಇದರ ನಡುವೆ ಸುಪ್ರೀಂಕೋರ್ಟ್ ಮಹತ್ವದ ನಿಲುವನ್ನು ತೆಗೆದುಕೊಂಡಿದ್ದು, ಇವಿಎಂ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಇವಿಎಂ ಸರಿಯಿಲ್ಲ ಎನ್ನುತ್ತಿದ್ದ ವಿಪಕ್ಷಗಳಿಗೆ ಸರ್ವೋಚ್ಛ ನ್ಯಾಯಾಲಯ ಚಾಟಿ ಬೀಸಿದೆ. ಸೋತಾಗ ಮಾತ್ರ ಇವಿಎಂ ಸರಿಯಿಲ್ಲ ಎನ್ನುತ್ತೀರಿ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಇವಿಎಂ ವಿರುದ್ಧ ಭಾರತ್ ಜೋಡೋ ರೀತಿ ರ‍್ಯಾಲಿ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.
ದೇಶದ ಚುನಾವಣೆಗಳಲ್ಲಿ ಇವಿಎಂ ಬಳಕೆ ನಿಲ್ಲಿಸಿ, ಪೇಪರ್ ಬ್ಯಾಲೆಟ್ ಮತದಾನ ಪದ್ಧತಿಯನ್ನು ಜಾರಿ ತರಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸಾಮಾಜಿಕ ಕಾರ್ಯಕರ್ತ ವಿಕೆ ಪೌಲ್ ಎಂಬುವವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಮಂಗಳವಾರ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ಚುನಾವಣೆಯಲ್ಲಿ ಸೋತಾಗ ಮಾತ್ರ ರಾಜಕಾರಣಿಗಳು ಇವಿಎಂ ಸರಿಯಿಲ್ಲ ಎಂದು ಆರೋಪಿಸುತ್ತಾರೆ ಎಂದು ಕೂಡ ಕಿಡಿಕಾರಿದೆ. ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ. ಪಿ.ಬಿ. ವರಾಳೆ ಅವರಿದ್ದ ಪೀಠ ಅರ್ಜಿದಾರರು ಹಾಗೂ ವಿಪಕ್ಷಗಳಿಗೆ ಇದೇ ವೇಳೆ ಚಾಟಿ ಬೀಸಿತು.
ಇನ್ನು, ಮುಂದುವರೆದು.. ಇಲ್ಲಿ, ಏನಾಗುತ್ತಿದೆ ಎಂದರೆ, ನೀವು ಚುನಾವಣೆಯಲ್ಲಿ ಗೆದ್ದಾಗ, ಇವಿಎಂ ಟ್ಯಾಂಪರಿಂಗ್ ಆಗಿರುವುದಿಲ್ಲ. ನೀವು ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂ ಟ್ಯಾಂಪರಿಂಗ್ ಆಗಿರುತ್ತವೆ. ಸೋತಾಗ ಮಾತ್ರ ಇವಿಎಂಗಳ ವಿರುದ್ದ ಆರೋಪ ಕೇಳಿಬರುತ್ತವೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬಹಳಷ್ಟು ದೇಶಗಳಲ್ಲಿ ಬ್ಯಾಲಟ್ ಪೇಪರ್ ಇದೆ ಎಂಬ ವಾದಕ್ಕೆ, ಎಲ್ಲ ದೇಶಗಳಲ್ಲಿ ಇದ್ದಿದ್ದೇ ಭಾರತದಲ್ಲೂ ಇರಬೇಕು ಎಂದು ಏಕೆ ಬಯಸುತ್ತೀರಿ? ಎಂದ ಪೀಠ ಬ್ಯಾಲೆಟ್ ಪೇಪರ್ ಮರುಜಾರಿ ಮಾಡಿದರೆ ಭ್ರಷ್ಟಾಚಾರ ನಿಲ್ಲುತ್ತದೆಯೇ ಎಂದು ಕೂಡ ಅರ್ಜಿದಾರರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರ ಬರದೇ ಇದ್ದಿದ್ದಕ್ಕೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಒಂದು ಕಡೆ ಸುಪ್ರೀಂ ಕೋರ್ಟ್ ಇವಿಎಂ ಬೇಡ ಎಂಬ ಅರ್ಜಿಯನ್ನು ತಿರಸ್ಕರಿಸಿದ್ದರೆ, ಮತ್ತೊಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವಿಎಂ ಬೇಡ ಎಂದು ಭಾರತ್ ಜೋಡೋ ರೀತಿ ರ‍್ಯಾಲಿ ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಸಂವಿಧಾನ ರಕ್ಷಣಾ ಅಭಿಯಾನದಲ್ಲಿ ಮಾತನಾಡಿದ ಅವರು, ಬಡವರು ಹಾಗೂ ದಮನಿತರ ಮತಗಳು ವ್ಯರ್ಥವಾಗಿ ಹೋಗುತ್ತಿವೆ. ಹೀಗಾಗಿ ಅವರೆಲ್ಲಾ ಇವಿಎಂ ಬೇಡ, ಮತ ಪತ್ರ ಬೇಕು ಎಂದು ಆಗ್ರಹಿಸಬೇಕು. ಇವಿಎಂಗಳನ್ನು ಬಿಜೆಪಿಯವರೇ ಇಟ್ಟುಕೊಳ್ಳಲಿ, ನಮಗೆ ಮತಪತ್ರ ಬೇಕು. ಆಗ ಬಿಜೆಪಿ ಸ್ಥಾನ ತಿಳಿಯುತ್ತದೆ ಎಂದು ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಹೀನಾಯವಾಗಿ ಸೋತ ಬೆನ್ನಲ್ಲೇ ಇವಿಎಂಗಳ ಮೇಲೆ ಭಾರೀ ಆರೋಪಗಳು ಕೇಳಿಬರುತ್ತಿದ್ದು, ಇವಿಎಂಗಳನ್ನು ಬಿಜೆಪಿ ತಿರುಚಿದೆ ಎಂದು ಗಂಭೀರ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಇವಿಎಂ ಇರೋವರೆಗೂ ನಾವು ಗೆಲ್ಲಲು ಆಗಲ್ಲ ಎನ್ನುತ್ತಿದ್ದಾರೆ. ಇದರ ನಡುವೆ ಇವಿಎಂ ಬಳಕೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವುದು ಚುನಾವಣಾ ಆಯೋಗಕ್ಕೆ ನೈತಿಕ ಬೆಂಬಲ ಸಿಕ್ಕಿದ್ದಂತೂ ಸುಳ್ಳಲ್ಲ.