ಟೆಲ್ ಆವೀವ್ : ಸ್ಥಳೀಯ ಅಧಿಕಾರಿಗಳ ಪ್ರಕಾರ, ನಿನ್ನೆ ಇಸ್ರೇಲ್ ಸಚಿವ ಸಂಪುಟ ಸಭೆಯ ಕೆಲವೇ ಗಂಟೆಗಳ ಮೊದಲು ಇಸ್ರೇಲ್ ಲೆಬನಾನ್ ಮೇಲೆ ತನ್ನ ಬಾಂಬ್ ದಾಳಿಯನ್ನು ಹೆಚ್ಚಿಸಿದ್ದು, ಅದರಲ್ಲಿ ಕನಿಷ್ಠ 23 ಜನರು ಸಾವಿಗೀಡಾಗಿದ್ದರು.
ಇದರ ಮಧ್ಯೆ ಇಸ್ರೇಲ್ ಮತ್ತು ಲೆಬನಾನ್ನ ಹಿಜ್ಬುಲ್ಲಾ ಮಧ್ಯೆ ಯುದ್ದವಿರಾಮ ಘೋಷಣೆಯಾಗಬೇಕು ಎಂಬ ಕೂಗು ಹೆಚ್ಚಾಗುತ್ತಿದ್ದು ನೆನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬೆಂಬಲ ನೀಡಿದ್ದಾರೆ ಎಂದು ಮಾಹಿತಿ ದೊರೆತಿದೆ.
ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಬೇಕು ಎಂದು ಜಾಗತಿಕ ಮಟ್ಟದ ಒತ್ತಡದ ನಡುವೆ ಇಸ್ರೇಲ್ ಮತ್ತು ಹೆಬ್ಬುಲ್ಲಾ ಲೆಬನಾನ್ ನಲ್ಲಿ ಕದನ ವಿರಾಮ ಘೋಷಿಸುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ. ಆದರೆ ಗಾಜಾದಲ್ಲಿ ಇಸ್ರೇಲ್ ಯುದ್ಧ ಮುಂದುವರಿದಿದೆ. ಶಾಶ್ವತವಾಗಿ ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಲೆಬನಾನ್ ಮೂಲದ ಭಯೋತ್ಪಾದಕ ಸಂಘಟನೆ ಹೆಬ್ಬುಲ್ಲಾ ಮತ್ತು ಇಸ್ರೇಲ್ ಅಮೆರಿಕದ ಉಸ್ತುವಾರಿಯಲ್ಲಿ ಕದನ ವಿರಾಮಕ್ಕೆ ಸಹಮತ ಸೂಚಿಸಿರುವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಘೋಷಿಸಿದ್ದಾರೆ.
ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ನ ಭದ್ರತಾ ಕ್ಯಾಬಿನೆಟ್ ಅನುಮತಿ ನೀಡಿದ ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಮುಂದಿನ 60 ದಿನದೊಳಗೆ ಕದನ ವಿರಾಮದ ಒಪ್ಪಂದದ ಪ್ರಕಾರ ಇಸ್ರೇಲ್ ಲೆಬನಾನ್ ನಿಂದ ತನ್ನ ಸೇನಾಪಡೆಯನ್ನು ಹಂತ, ಹಂತವಾಗಿ ವಾಪಸ್ ಕರೆಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.