ಹೈದರಾಬಾದ್ : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿರುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಬಂಧನ ಭೀತಿ ಎದುರಾಗಿದೆ. ನವೆಂಬರ್ 25ರಂದು ರಾಮ್ ಗೋಪಾಲ್ ವರ್ಮರನ್ನು ಪೋಲಿಸರು ಅವರ ಹೈದರಾಬಾದ್ನಲ್ಲಿನ ಮನೆಗೆ ಹೋಗಿದ್ದು, ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಂದ್ರಬಾಬು ನಾಯ್ಡು ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕಾಗಿ ಹೈದರಾಬಾದ್ ನ ಮುದ್ದಿಪಡು ಪೊಲೀಸ್ ಠಾಣೆಯಲ್ಲಿ ವರ್ಮಾ ವಿರುದ್ಧ ನ. 11ರಂದು ಕೇಸ್ ದಾಖಲಾಗಿತ್ತು. ನಾಯ್ಡು ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಅವರ ಕುಟುಂಬ ಸದಸ್ಯರ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾಗಿ ಅವರ ವಿರುದ್ಧ ಕೇಸ್ ದಾಖಲಾಗಿದೆ.
ಅವರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ಆದರೆ, ಆ ಸಮನ್ಸ್ ಗೆ ರಾಮ್ ಗೋಪಾಲ್ ವರ್ಮಾ ಸ್ಪಂದಿಸಿರಲಿಲ್ಲ, ವಿಚಾರಣೆಗೆ ಹಾಜರಾಗಿರಲಿಲ್ಲ.
ಹಾಗಾಗಿ, ಪೊಲೀಸರು ರಾಮ್ಗೋಪಾಲ್ ವರ್ಮಾರನ್ನು ಬಂಧಿಸಲು ಮುಂದಾಗಿದ್ದಾರೆ. ಆದರೆ, ವರ್ಮಾ ಪೊಲೀಸರಿಗೆ ಸಿಕ್ಕಿಲ್ಲ. ಹೈದರಾಬಾದ್ ನಲ್ಲಿರುವ ವರ್ಮಾ ಅವರ ನಿವಾಸದ ಮುಂದೆ ಆಗಮಿಸಿದ ಪೊಲೀಸರು, ಮನೆಯಲ್ಲಿ ಅವರು ಇಲ್ಲವೆಂಬ ಉತ್ತರ ಕೇಳಿ ಅವಾಕ್ಕಾದರು. ಮನೆಯ ಮುಂದೆಯೇ ತಾಸುಗಟ್ಟಲೆ ಕಾದು ಕುಳಿತ ಅವರಿಗೆ ಕಡೆಗೂ ಸಿಕ್ಕಿದ್ದು ಶೂನ್ಯ ಫಲಿತಾಂಶ. ರಾಮ್ಗೋಪಾಲ್ ವರ್ಮ ಮನೆಗೆ ಬರಲೇ ಇಲ್ಲ. ಅಲ್ಲಿಗೆ, ಅವರು ಪೊಲೀಸರಿಂದ ತಪ್ಪಿಸಿಕೊಂಡು ಹೋಗಿರುವುದು ಸ್ಪಷ್ಟವಾಯಿತು.
ಅತ್ತ, ಹೈದಾರಾಬಾದ್ ಎಸ್ಪಿಯವರು ಮಾತನಾಡಿ, ವಿಚಾರಣೆಗೆ ಹಾಜರಾಗುವಂತೆ ನೀಡಲಾಗಿದ್ದ ಸಮನ್ಸ್ ಗೆ ವರ್ಮಾ ಉತ್ತರಿಸಿಲ್ಲ. ವಿಚಾರಣೆಗೂ ಹಾಜರಾಗಿಲ್ಲ. ಹಾಗಾಗಿ, ಕಾನೂನಾತ್ಮಕವಾಗಿ ನಾವು ಹೆಜ್ಜೆಯಿಟ್ಟಿದ್ದು ಅವರನ್ನು ಬಂಧಿಸಲು ಮುಂದಾಗಿದ್ದೇವೆ. ಅವರಿನ್ನೂ ಸಿಕ್ಕಿಲ್ಲ. ಆದರೆ, ನಮ್ಮ ಬಂಧನ ಕ್ರಮ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.ಈ ಎಲ್ಲಾ ಹೈಡ್ರಾಮಾಗಳ ನಡುವೆಯೇ, ರಾಮ್ಗೋಪಾಲ್ ವರ್ಮ ಪರ ವಕೀಲರು ನ. 25ರಂದು ಸಂಜೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯಕ್ಕೆ ವರ್ಮಾ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿರುವ ಅವರು, ಠಾಣೆಗೆ ಭೌತಿಕವಾಗಿ ಹಾಜರಾಗುವ ಅವಶ್ಯಕತೆಯೇನಿಲ್ಲ. ಅದರ ಬದಲು ಡಿಜಿಟಲ್ ಮೂಲಕ ಅವರು ಹಾಜರಾಗುತ್ತಾರೆ. ಈ ಕೇಸ್ ನಲ್ಲಿ ಡಿಜಿಟಲ್ ಮಾದರಿಯಲ್ಲಿ ಹಾಜರಾಗಲು ಹೊಸದಾಗಿ ಜಾರಿಯಾಗಿರುವ ಭಾರತ್ ನಾಗರಿಕ್ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್)ದಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ