ದೆಹಲಿ: ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಿದ 1976ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. 1976ರಲ್ಲಿ ತುರ್ತು ಪರಿಸ್ಥಿತಿಯ ವೇಳೆ 42ನೇ ತಿದ್ದುಪಡಿ ಮೂಲಕ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಬಿಜೆಪಿ ಹಿರಿಯ ನಾಯಕ ಡಾ.ಸುಬ್ರಮಣಿಯನ್ ಸ್ವಾಮಿ, ಬಲರಾಮ್ ಸಿಂಗ್ ಹಾಗೂ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ಕುರಿತಾದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠ ನವೆಂಬರ್ 22ರಂದು ಕಾಯ್ದಿರಿಸಿತ್ತು. ಈ ಅರ್ಜಿಗಳ ಬಗ್ಗೆ ವಿವರವಾದ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಸಿಜೆಐ ಸಂಜೀವ್ ಖನ್ನಾ ನೇತೃತ್ವದ ಪೀಠ ಹೇಳಿದೆ.
ಏನಿದು 42ನೇ ಸಂವಿಧಾನ ತಿದ್ದುಪಡಿ ?
1976ರ ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಸಂವಿಧಾನದ ಪೀಠಿಕೆಗೆ ಜಾತ್ಯಾತೀತ ಮತ್ತು ಸಮಾಜವಾದ ಎಂಬ ಹೊಸ ತತ್ವಗಳನ್ನು ಸೇರಿಸಿದರು. ಆದರೆ ಈ ಸಮಯದಲ್ಲಿ ಸಂಸತ್ತಿನ ನಿಯಾಮಳಿಯಂತೆ ಶಾಸನವನ್ನು ಅಂಗೀಕರಿಸುವ ಕೆಲಸವಾಗಿಲ್ಲ ಆದ್ದರಿಂದ ಈ ತಿದ್ದುಪಡಿಗೆ ಯಾವುದೇ ಮಹತ್ವವಿಲ್ಲ ಎಂದು ಕೆಲವರು ಈ ಪದಗಳ ಸೇರ್ಪಡೆಯನ್ನು ವಿರೋಧಿಸುತ್ತಾರೆ.