ದೆಹಲಿ : 2025ರ ಫೆಬ್ರವರಿಯಲ್ಲಿ ನಡೆಯುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ಸಜ್ಜಾಗುತ್ತಿದ್ದು. ನೆನ್ನೆ(ನ.22) ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಬಾರಿ ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ 6 ಉಚಿತ ಕೊಡುಗೆಗಳನ್ನು ಘೋಷಿಸಿದ್ದು, ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಉಚಿತ ಕೊಡುಗೆಗಳ ಬಗ್ಗೆ ಚರ್ಚಾ ಕಾರ್ಯಕ್ರಮದಲ್ಲೂ ಅರವಿಂದ ಕೇಜ್ರಿವಾಲ್ ಭಾಗಿಯಾಗಿದ್ದರು.
ದೆಹಲಿಯಲ್ಲಿನ ಶೋಷಿತರು, ಮಹಿಳೆಯರ ಅಭಿವೃದ್ದಿಯೇ ಆಮ್ ಆದ್ಮಿ ಪಾರ್ಟಿಯ ಪ್ರಮುಖ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿಯೇ ಪಕ್ಷ ಉಚಿತ ಕೊಡುಗೆ ಯೋಜನೆಗಳನ್ನು ಮುಂದುವರಿಸಲು ಉದ್ದೇಶಿಸಿದೆ ಎಂದು ಈ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲ್ ಹೇಳಿದರು. ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆಗಳು, ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಮೊದಲು ದೆಹಲಿಯಲ್ಲಿ ನೀಡಲಾಗುತ್ತಿರುವ ಎಲ್ಲ ಉಚಿತ ಯೋಜನೆಗಳನ್ನೂ ತಮ್ಮ ಪಕ್ಷ ಮುಂದುವರಿಸುತ್ತದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದರು. ಜತೆಗೆ ಬಿಜೆಪಿ ಏನಾದರೂ ಅಧಿಕಾರಕ್ಕೆ ಬಂದರೆ, ಬಡವರ ಪರವಾಗಿ ರೂಪಿಸಿರುವ ಎಲ್ಲ ಉಚಿತ ಕೊಡುಗೆಗಳನ್ನೂ ರದ್ದುಮಾಡುತ್ತದೆ ಈ ಬಗ್ಗೆ ದೆಹಲಿಯ ನಾಗರಿಕರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದೂ ಸಹ ಅರವಿಂದ ಕೇಜ್ರಿವಾಲ್ ಹೇಳಿದರು.
ಆಮ್ ಆದ್ಮಿ ಪಾರ್ಟಿ ಘೋಷಿಸಿರುವ ಉಚಿತ ಕೊಡುಗೆಗಳೆಂದರೆ. ದೆಹಲಿಯ ಎಲ್ಲ ನಿವಾಸಿಗಳಿಗೆ 200 ಯೂನಿಟ್ ಗುಣಮಟ್ಟದ ವಿದ್ಯುತ್ ಉಚಿತ. ದೆಹಲಿಯ ಎಲ್ಲ ನಾಗರಿಕರಿಗೂ ಉಚಿತ ಶುದ್ದ ಕುಡಿಯುವ ನೀರು ಪೂರೈಕೆ. ದೆಹಲಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣ ಉಚಿತ ಶಿಕ್ಷಣ. ಮೊಹಲ್ಲಾ ಕ್ಲೀನಿಕ್ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ, ದೆಹಲಿ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಹಿರಿಯ ನಾಗಕರಿಕರಿಗೆ ಉಚಿತ ತೀರ್ಥಯಾತ್ರಾ ವ್ಯವಸ್ಥೆ.
ದೆಹಲಿಯಲ್ಲಿ ಈ ಉಚಿತ ಕೊಡುಗೆ ಯೋಜನೆಗಳ ಬಗ್ಗೆ 65 ಸಾವಿರ ಚರ್ಚಾ ಕಾರ್ಯಕ್ರಮಗಳನ್ನು ಆಮ್ ಆದ್ಮಿ ಪಾರ್ಟಿ ಆಯೋಜಿಸಿದೆ.ದೆಹಲಿ ನಿವಾಸಿಗಳ ಅಭಿಪ್ರಾಯಪಡೆದು ಬಳಿಕ ಈ ಉಚಿತ ಕೊಡುಗೆಗಳನ್ನು ಮುಂದುವರಿಸಲು ಅಥವಾ ಬದಲಾವಣೆ ಮಾಡಲೂ ಸಹ ಪಕ್ಷ ಉದ್ದೇಶಿಸಿದೆ.