ನಾಲಾ (ಜಮ್ತಾರಾ): ಜೆಎಂಎಂ ನೇತೃತ್ವದ ಒಕ್ಕೂಟದ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ತಮ್ಮ ಟೀಕೆಗಳನ್ನು ತೀವ್ರಗೊಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ ನೈಸರ್ಗಿಕ ಸಂಪನ್ಮೂಲಗಳು ಮತ್ತು ಕೇಂದ್ರದ ಹಣವನ್ನು ಲೂಟಿ ಮಾಡುವ ಮೂಲಕ “ಡಕಾಯಿತಿಯಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು
ಸುರಕ್ಷಿತವಾಗಿರಲು ಹಿಂದೂಗಳು ಒಂದಾಗಬೇಕು ಎಂದು ಕರೆ ನೀಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣವಾಗುವ ಸಮಯ ಬಂದಿದೆ ಎಂದು ಪ್ರತಿಪಾದಿಸಿದರು.
ಜಮ್ತಾರಾದ ನಾಲಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, “ಜೆಎಂಎಂ ನೇತೃತ್ವದ ಒಕ್ಕೂಟವು ಜಾರ್ಖಂಡ್‌ನ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಮೋದಿ ಕಳುಹಿಸಿದ ಕೇಂದ್ರ ನಿಧಿಯನ್ನು ಲೂಟಿ ಮಾಡಿದೆ. ಇದು ಬಾಂಗ್ಲಾದೇಶಿ ವಲಸಿಗರು ಮತ್ತು ರೋಹಿಂಗ್ಯಾಗಳ ಒಳನುಸುಳುವಿಕೆಯನ್ನು ಉತ್ತೇಜಿಸಿದೆ. ಮರಳು, ಕಲ್ಲಿದ್ದಲು ಮತ್ತು ಅರಣ್ಯ ಸಂಪನ್ಮೂಲಗಳ ಅವ್ಯಾಹತವಾಗಿ ಹೊರತೆಗೆಯುವುದು ಸೇರಿದಂತೆ ಅಕ್ರಮ ಗಣಿಗಾರಿಕೆಯು ಆಡಳಿತ ಸಮ್ಮಿಶ್ರ ಸರ್ಕಾರದ ರಕ್ಷಣೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದು, ಜಾರ್ಖಂಡ್ ಮಾಫಿಯಾ ಚಟುವಟಿಕೆಗಳಿಂದ ಟೊಳ್ಳಾಗಿದೆ ಎಂದು ಆದಿತ್ಯನಾಥ್ ಆರೋಪಿಸಿದರು.
ಜಾರ್ಖಂಡ್‌ನಲ್ಲಿ ಲ್ಯಾಂಡ್ ಜಿಹಾದ್ ಮತ್ತು ಲವ್ ಜಿಹಾದ್‌ನಲ್ಲಿ ತೊಡಗಿರುವ ನುಸುಳುಕೋರರಿಗೆ ಜೆಎಂಎಂ ನೇತೃತ್ವದ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ ಅವರು, ಎನ್‌ಡಿಎ ಅಧಿಕಾರಕ್ಕೆ ಬಂದರೆ ಅಂತಹ ಶಕ್ತಿಗಳನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅವರು ಅಡ್ಡಿಪಡಿಸಿದ್ದಾರೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಸಿಎಂ ಕಾಂಗ್ರೆಸ್-ಜೆಎಂಎಂ ಮೈತ್ರಿಯನ್ನು ಗುರಿಯಾಗಿಸಿಕೊಂಡರು. ಈಗ ಅವರು ತಮ್ಮ ಒಡೆದು ಆಳುವ ರಾಜಕಾರಣದ ಮೂಲಕ ಜಾರ್ಖಂಡ್‌ನಲ್ಲಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.
1947 ರಲ್ಲಿ ವಿಭಜನೆಯ ಸಮಯದಲ್ಲಿ ಕನಿಷ್ಠ 10 ಲಕ್ಷ ಹಿಂದೂಗಳನ್ನು ಕಗ್ಗೊಲೆ ಮಾಡಲಾಗಿತ್ತು ಎಂದು ಹೇಳಿದ ಆದಿತ್ಯನಾಥ್, ಹಿಂದೂಗಳು ವಿಭಜನೆಗೊಂಡಿದ್ದರಿಂದ ಅಂದು ಆ ರೀತಿಯ ಘಟನೆ ನಡೆಯಿತು ಆದ್ದರಿಂದ ಸುರಕ್ಷಿತವಾಗಿರಲು ಒಗ್ಗಟ್ಟಾಗಬೇಕೆಂದು ಒತ್ತಾಯಿಸಿದರು.