ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ಆಗ್ರಹಿಸಿ ಮಂಡಿಸಿದ್ದ ನಿರ್ಣಯ ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಜಮ್ಮು ಕಾಶ್ಮೀರ್ದ ವಿಧಾನ ಸಬೆಯಲ್ಲಿ ಇಂದು ಭಾರಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಪರಿಣಾಮ ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಬಿಜೆಪಿ ಶಾಸಕರನ್ನು ಹೊರಹಾಕುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್ ಅಬ್ದುಲ್ ರಾಥರ್ ಸೂಚಿಸಿರುವ ಪ್ರಸಂಗವು ಘಟಿಸಿತು.
ಇಂದು ಬೆಳಿಗ್ಗೆ ಸದನ ಆರಂಭವಾದ ಬೆನ್ನಲ್ಲೇ ವಿಶೇಷ ಸ್ಥಾನಮಾನ ಮರುಸ್ಥಾಪನೆ ನಿರ್ಣಯದ ವಿರುದ್ದ ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ಬಿಜೆಪಿ ಶಾಸಕ, ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ವಿಶೇಷ ಸ್ಥಾನಮಾನ ಮರುಸ್ಥಾಪನೆ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡುತ್ತಿದ್ದ ವೇಳೆ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಶೇಖ್ ಖುರ್ಷೀದ್ ಸದನದ ಬಾವಿಳಿಗಿಳಿದು ಸಂವಿಧಾನದ 370ನೇ ವಿಧಿ ಮರುಸ್ಥಾಪಿಸುವ ಬ್ಯಾನರ್ ಪ್ರದರ್ಶಿಸಿದರು.
ಸದನದಲ್ಲಿ ಸದಸ್ಯರು ಪರಸ್ಪರ ಕೈಕೈ ಮಿಲಾಯಿಸಿಕೊಂಡ ಘಟನೆಯು ನಡೆಯಿತು. ಕಾಶ್ಮೀರದಲ್ಲಿ ಮತ್ತೆ ಆರ್ಟಿಕಲ್ 370ಯನ್ನು ಪುನಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ನೀಡಿದ್ದು ‘ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ನಾವು ಏನು ಮಾಡಬೇಕೊ ಅದನ್ನೆಲ್ಲಾ ಮಾಡಿಯಾಗಿದೆ’ ಎಂದು ಹೇಳಿದರು.