ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದ್ದು.ಭಾನುವಾರ ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮುನ್ನಾ ದಿನವಾದ ಶನಿವಾರ ಗಣ್ಯರು ಹಾಗೂ ಭಕ್ತರು (Devotees) ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಹೀಗಾಗಿ ದೇವಾಲಯದ ಒಳ ಹೊರಗೆ ಭಕ್ತರ ಜಾತ್ರೆಯೇ ನೆರೆದಿತ್ತು. ಈ ಬಾರಿ ಜಾತ್ರಾ ಮಹೋತ್ಸವ ಇತಿಹಾಸ ನಿರ್ಮಿಸಿದ್ದು, ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದೆ.
ಹಾಸನಾಂಬೆ ದರ್ಶನೋತ್ಸವದ ತೆರೆಗೆ ಕೌಂಟ್‌ಡೌನ್ ಶುರುವಾಗಿದೆ. ನಿನ್ನೆ ವೀಕೆಂಡ್ ಜೊತೆಗೆ ಹಬ್ಬದ ರಜೆಯಿದ್ದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿ ದೇವತೆಯ ದರ್ಶನ ಪಡೆದು ಪುನೀತರಾದ್ರು. ಒಟ್ಟು 18 ಲಕ್ಷಕ್ಕೂ ಹೆಚ್ಚು ಭಕ್ತರು ಈ ಬಾರಿ ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ.
ದೇವಾಸ್ಥಾನಕ್ಕೆ ಹರಿದು ಬಂದ ಭಾರೀ ಕಾಣಿಕೆ
1,000, 300 ರೂ. ವಿಶೇಷ ದರ್ಶನದ ಟಿಕೆಟ್‌ಗಳು, ಲಾಡು ಮಾರಾಟ ಹಾಗೂ ದೇವರ ಸೀರೆ ಮಾರಾಟದಿಂದ 8 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ಇತಿಹಾಸದಲ್ಲೇ ಈ ಬಾರಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಂಖ್ಯೆಯ ಭಕ್ತರಿಂದ ದೇವಿ ದರ್ಶನ ಹಾಗೂ ಅತಿ ಹೆಚ್ಚು ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ಕೊನೆ ಕ್ಷಣದಲ್ಲಿಯು ದೇವಿಯ ದರ್ಶನ ಪಡೆಯಲು ಭಕ್ತರ ಹರಸಾಹಸ
ಸಾರ್ವಜನಿಕ ದರ್ಶನ ಅಂತ್ಯವಾದರೂ ದೇವಿ ದರ್ಶನ ಪಡೆಯಲು ಭಕ್ತರು ಹರಸಾಹಸ ನಡೆಸುತ್ತಿದ್ದು. ಭಕ್ತರು ದೇವಾಲಯದ ಕಾಂಪೌಂಡ್ ಹತ್ತಿ ದೇವಾಲಯದ ಆವರಣಕ್ಕೆ ಬರುತ್ತಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಪೋಲಿಸಸರು ಹರಸಾಹಸ ಪಡುತ್ತಿದ್ದು. ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯಲು ಸಾಧ್ಯವಾಗದೆ ನಿರಾಸಿತರಾಗಿದ್ದಾರೆ.
ಮುಂದಿನ ವರ್ಷ ಮತ್ತೆ ತೆರೆಯಲಿದೆ ದೇಗುಲ !
ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲನ್ನು ಮುಚ್ಚಲಿದ್ದು. ಇಂದಿನಿಂದ ಒಂದು ವರ್ಷಗಳ ಕಾಲ ದೇವಾಲದ ಬಾಗಿಲನ್ನು ತೆರೆಯುವುದಿಲ್ಲ. ಮುಂದಿನ ವರ್ಷ ಅಕ್ಟೋಬರ್ 9 ರಿಂದ ಅಕ್ಟೋಬರ್ 23 ರವರೆಗೆ ಮತ್ತೆ ತನ್ನ ಭಕ್ತರಿಗೆ ತಾಯಿ ಹಾಸನಾಂಬೆ ದರ್ಶನ ಕರುಣಿಸಲಿದ್ದಾರೆ.