Saturday, November 23, 2024

Power tv 6th anniversary :ಶ್ರೀಮತಿ ಷಹಜಾನ್​ ಬಿಲ್ಲಳ್ಳಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಇಲ್ಲೊಬ್ಬರು ಆ ಮಾತನ್ನು ಅಕ್ಷರಶಃ ನಿಜವಾಗಿಸಿದ್ದಾರೆ. ಇವರನ್ನ ನೋಡಿಯೇ ಆ ಮಾತು ಹೇಳಿರಬೇಕು ಎಂಬಂತಿದೆ. ಅವರೇ ಶ್ರೀಮತಿ ಷಹಜಾನ್​ ಬಿಲ್ಲಳ್ಳಿ.

ಶ್ರೀಮತಿ ಷಹಜಾನ್ ಬಿಲ್ಲಳ್ಳಿಯವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಮಲೆಕುಂಬಳೂರಿನ ನಿವಾಸಿ. 1970 ಜುಲೈ 1ರಂದು ಅಬ್ಬುಲ್ ಸತ್ತಾರ್ ಸಾಬ್, ಫಾತೀಮಾಬಿ ದಂಪತಿಯ ಐದನೇ ಪುತ್ರಿಯಾಗಿ ಜನಿಸಿದ್ರು. ಬಡ ಕುಟುಂಬದಲ್ಲಿ ಕಷ್ಟ ಪಟ್ಟು ಓದಿ ಟಿಸಿಎಚ್​ನಲ್ಲಿ ಕಾಲೇಜಿಗೆ ಮೊದಲ ಱಂಕ್ ಪಡೆದು ಉತ್ತೀರ್ಣರಾಗಿದ್ರು. ಶಾಲಾ ಶಿಕ್ಷಕಿಯಾಗಿ ನೇಮಕಾತಿ ಬಳಿಕ ಶರೀಫ್ ಅವರನ್ನ ಮದುವೆಯಾಗಿದ್ದಾರೆ. ಈ ದಂಪತಿಗೆ ಶಮಾ ಮತ್ತು ಸೀಮಾ ಎಂಬ ಮಕ್ಕಳಿದ್ದಾರೆ. ಸದ್ಯ ಕೋಣನ ತಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇವರು ಶಿಕ್ಷಕಿಯಾಗಿದ್ದಾರೆ..

ಷಹಜಾನ್ ತಮಗೆ ಬರುವ 68 ಸಾವಿರ ರೂಪಾಯಿ ಸಂಬಳವನ್ನು ಸಂಪೂರ್ಣವಾಗಿ ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಪತಿಯ ಸಂಬಳದಲ್ಲಿ ಮನೆ ನಿರ್ವಹಣೆ ಮಾಡಲಾಗುತ್ತದೆ. ಸಾಧಕರನ್ನು ಗುರುತಿಸಿ ಸನ್ಮಾನಿಸುವುದು, ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. 350ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಮನೆ ಪಾಠ ಮಾಡುತ್ತಾರೆ. ಆ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಐತಿಹಾಸಿಕ ಸ್ಥಳಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಪೋಷಕರಿಗೆ ಮತ್ತು ಮಕ್ಕಳಿಗೆ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ವಂತ ಖರ್ಚಿನಲ್ಲಿ ಆಯೋಜಿಸುತ್ತಾರೆ.

ಇನ್ನು ಕೊರೋನಾ ಸಮಯದಲ್ಲಿ ಮನೆಯಲ್ಲಿ ಮಾಸ್ಕ್‌ಗಳನ್ನು ತಯಾರಿಸಿ ಉಚಿತವಾಗಿ ವಿತರಿಸಿದ್ದಾರೆ. ಬಡಕುಟುಂಬಗಳಿಗೆ ದಿನಸಿ ವಿತರಿಸಿದ್ದಾರೆ. ಅಗತ್ಯ ಇರುವ ಬಡವರು ಮತ್ತು ನಿರ್ಗತಿಕರಿಗೆ ಈಗಲೂ ಧನ‌ಸಹಾಯ ಮಾಡುತ್ತಾರೆ. ಯಾವುದೇ ಜಾತಿ, ಧರ್ಮ ನೋಡದೇ ಪ್ರಚಾರ ಬಯಸದೇ ಸೇವೆ ಮಾಡುತ್ತಾ ಬಂದಿದ್ದಾರೆ. ಇವರ ಸೇವೆ ಗುರುತಿಸಿ ಬೆಂಗಳೂರಿನ ಮಾನವ ಚಾರಿಟೀಸ್ ಹಾಗೂ ವೀರವನಿತೆ ರಾಣಿ ಚೆನ್ನಮ್ಮ ಸಂಸ್ಥೆಯಿಂದ ಮಾನವ ಸದ್ಭಾವನಾ ಪ್ರಶಸ್ತಿ.. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ.. ಜಿಲ್ಲಾ ಹಾಗೂ ತಾಲ್ಲೂಕು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ.. ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಧನಾ ಶಿಕ್ಷಕಿ ಪ್ರಶಸ್ತಿ.. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ, ಗೌರವಿಸಿವೆ. ಹೀಗೆ ಸೇವೆಯೇ ಪರಮೋಧರ್ಮ ಎಂದು ನಂಬಿದ ಶಿಕ್ಷಕಿ ಷಹಜಾನ್​ ಅವರಿಗೆ ಕರುನಾಡ ಕಣ್ಮಣಿ  ಪ್ರಶಸ್ತಿ ನೀಡಿ ಗೌರವಿಸಲು ಪವರ್​ ಟಿವಿ ಹರ್ಷ ಪಡುತ್ತದೆ.

 

RELATED ARTICLES

Related Articles

TRENDING ARTICLES