ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಆದರೆ ಇವತ್ತಿನ ದುಬಾರಿ ದುನಿಯಾದಲ್ಲಿ ಈ ಮಾತಿಗೆ ಅರ್ಥವೇ ಇಲ್ಲದಂತಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚ ಜನ ಸಾಮಾನ್ಯರ ಪಾಲಿಗೆ ಬಿಸಿತುಪ್ಪ ಆಗಿರುವುದು ಸುಳ್ಳಲ್ಲ. ಶೀತ, ಜ್ವರ ಎಂದು ಆಸ್ಪತ್ರೆಗೆ ತೆರಳಬೇಕಿದ್ದರೂ ಸಾವಿರಾರು ರೂಪಾಯಿ ಜೇಬಿನಲ್ಲಿರಬೇಕು ಎಂಬ ಪರಿಸ್ಥಿತಿ. ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿರುವ ಕ್ಲಿನಿಕ್ಗಳಲ್ಲೂ ಸಾಮಾನ್ಯ ಜ್ವರದ ಚಿಕಿತ್ಸೆಗೆ ನಾಲ್ಕೈದು ನೂರು ರೂಪಾಯಿ ಪಾವತಿಸಬೇಕಾದ ಪರಿಸ್ಥಿತಿಯಿದೆ. ಅಂಥವರ ಮಧ್ಯೆ ವೈದ್ಯೋ ನಾರಾಯಣ ಹರಿ ಎಂಬುದಕ್ಕೆ ಅನ್ವರ್ಥವಾಗಿ, ಬಡವರ ಪಾಲಿನ ವೈದ್ಯರಾಗಿ, ಜನಾನುರಾಗಿಯಾಗಿದ್ದಾರೆ ಡಾ. ಸೋಮಶೇಖರ್.
ಡಾ.ಸೋಮಶೇಖರ್ ಅವರು ಮೂಲತಃ ದೊಡ್ಡಬಳ್ಳಾಪುರದ ತೂಬಗೆರೆ ನಿವಾಸಿ. ತಂದೆ ಶ್ರೀಕಂಠಪ್ಪ, ತಾಯಿ ನಂಜಮ್ಮ. ಸೆಪ್ಟೆಂಬರ್ 21, 1946ರಂದು ಜನಿಸಿದ ಇವರು ಹುಟ್ಟೂರಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು, ಆ ದಿನಗಳಲ್ಲೇ ವೈದ್ಯರಾಗುವ ಕನಸು ಕಂಡಿದ್ದರು. ಅದೇ ಗುರಿಯಿಂದ ಉತ್ತಮ ವಿದ್ಯಾಭ್ಯಾಸ ಮಾಡಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಪೂರೈಸಿದ್ರು. ಉನ್ನತ ಶಿಕ್ಷಣ ಪಡೆದ ಸೋಮಶೇಖರ್ ಅವರಿಗೆ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಅವಕಾಶವೂ ಒದಗಿಬಂತು.
1960ರ ದಶಕದಲ್ಲೇ ವೈದ್ಯರಾಗಿದ್ದ ಡಾ.ಸೋಮಶೇಖರ್ ಅವರು ಮನಸ್ಸು ಮಾಡಿದ್ದರೆ ಸಾಕಷ್ಟು ದುಡ್ಡು ಗಳಿಸುವ ಅವಕಾಶವಿತ್ತು. ಜೊತೆಗೆ ಬೆಂಗಳೂರಿನಲ್ಲಿ ತಮ್ಮದೇ ಆದ ದೊಡ್ಡ ಆಸ್ಪತ್ರೆಯನ್ನೂ ಕಟ್ಟಿಸಬಹುದಿತ್ತು. ಆದರೆ ಕೆಲ ವರ್ಷಗಳ ಸೇವೆಯಲ್ಲೇ ಇವರಿಗೆ ಜನತಾ ಜನಾರ್ದನನ ಸೇವೆಯ ಮಹತ್ವದ ಅರಿವಾಗಿತ್ತು. ಹಾಗಾಗಿ ಬಡವರಿಗೆ, ಸಾಮಾನ್ಯ ಜನರಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಉದ್ದೇಶದೊಂದಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕ್ಲಿನಿಕ್ ಆರಂಭಿಸಿದರು. ಚಿಕಿತ್ಸೆಗೆ ನೂರಾರು ರೂಪಾಯಿ ವೆಚ್ಚವಾಗುತ್ತಿದ್ದ ಆ ದಿನಗಳಲ್ಲೇ ಇವರು, ಕೇವಲ ಒಂದು ರೂಪಾಯಿ ಮಾತ್ರ ಪಡೆದು ಆರೋಗ್ಯ ತಪಾಸಣೆ ಮಾಡುತ್ತಿದ್ರು.
ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಇರಲಿ ಡಾ.ಸೋಮಶೇಖರ್ ಕೈಗುಣದಿಂದ ಗುಣವಾಗುತ್ತೆ ಅಂತಾರೆ ಚಿಕಿತ್ಸೆ ಪಡೆದವರು. ಸುದೀರ್ಘ ಎರಡ್ಮೂರು ದಶಕಗಳಿಂದ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ ಡಾ.ಸೋಮಶೇಖರ್. ಚಾಮರಾಜಪೇಟೆ, ವಿಜಯನಗರ, ಬಸವೇಶ್ವರ ನಗರ, ರಾಜಾಜಿನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇವರು ಒನ್ ರುಪಿ ಡಾಕ್ಟರ್ ಅಂತಾನೇ ಫೇಮಸ್ಸಾಗಿದ್ದಾರೆ. ಇತ್ತೀಚೆಗೆ ಕೊರೋನಾದ ಸಂಕಷ್ಟದ ದಿನಗಳಲ್ಲೂ ಇವರು ಬಡವರಿಗಾಗಿ ಮಿಡಿದಿದ್ದಾರೆ. ಆಗ ಸಾಕಷ್ಟು ಆಸ್ಪತ್ರೆಗಳಲ್ಲಿ ವೈದ್ಯರು ಚಿಕಿತ್ಸೆಗೆ ದುಬಾರಿ ಬಿಲ್ ಮಾಡುತ್ತಿದ್ದರು. ಅಲ್ಲದೇ ಎಷ್ಟೋ ಕ್ಲಿನಿಕ್ಗಳ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಅಂತಹ ಕೊರೋನಾ ದಿನಗಳಲ್ಲಿಯೂ ಜನರಿಗಾಗಿ ಕ್ಲಿನಿಕ್ ತೆರೆದು, ಕೇವಲ 25 ರೂಪಾಯಿಗೆ ಚಿಕಿತ್ಸೆ ನೀಡಿದ್ದ ಹಿರಿಮೆ ಇವರದ್ದು. Only a life lived for others is a life worthwhile ಎಂಬ ಮಾತಿದೆ. ಅಂತೆಯೇ ಬಡವರಿಗಾಗಿ, ಸಾಮಾನ್ಯ ಜನರಿಗಾಗಿ ಜೀವನ ತೇಯ್ದವರು ಡಾ. ಸೋಮಶೇಖರ್. ಆದರ್ಶ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸೋಮಶೇಖರ್ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲು ಪವರ್ ಟಿವಿ ಹರ್ಷ ಪಡುತ್ತದೆ.