ಚಾಮರಾಜನಗರ ; ನಿತ್ಯ ನೂರಾರು ಮಂದಿ ಒಡಾಡುವ ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೂ ಈಗ ಕೊರೊನಾ ಭಯ ಆವರಿಸಿದ್ದು ಜಿಲ್ಲಾಡಳಿತ ಭವನ ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ಬಾಗಿಲನ್ನು ಸೀಮಿತಗೊಳಿಸಲಾಗಿದೆ.
ಜಿಲ್ಲಾಡಳಿತ ಭವನಕ್ಕೆ ಬರೋಬ್ಬರಿ 6 ಬಾಗಿಲಗಳಿದ್ದು ಜನರು ಮತ್ತು ಅಧಿಕಾರಿಗಳು ತಮ್ಮಿಚ್ಛೆ ಬಂದ ರೀತಿ ಓಡಾಡುತ್ತಿದ್ದರು. ಆದರೆ, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದೇ ಪ್ರವೇಶದ್ವಾರದ ಮೂಲಕ ಬರುವ ಜನರನ್ನು ಸ್ಕ್ರೀನಿಂಗ್ ಒಳಪಡಿಸಿದ ಬಳಿಕವಷ್ಟೇ ಕಚೇರಿ ಒಳಗೆ ಬಿಡಲಾಗುತ್ತಿದೆ.
ಈ ಹಿಂದಿನಿಂದಲೂ ಸ್ಕ್ರೀನಿಂಗ್ ಮಾಡುತ್ತಿದ್ದರೂ ಇತರೆ ಬಾಗಿಲುಗಳಿಂದಲೂ ಜನರು ಪ್ರವೇಶಿಸುತ್ತಿದ್ದರು. ಮುಖ್ಯದ್ವಾರದಲ್ಲಿ ಬರುವವರಿಗೆ ಮಾತ್ರ ಜ್ವರ ತಪಾಸಣೆ ನಡೆಸಲಾಗುತ್ತಿದ್ದು ಈಗ ಎಲ್ಲರೂ ಮುಖ್ಯದ್ವಾರದಿಂದ ಬರಬೇಕಿದ್ದರಿಂದ ಕೊರೊನ ನಿಗಾ ಹೆಚ್ಚಾಗಿದೆ.
ಇನ್ನು, ನಗರದ ಪೊಲೀಸ್ ಠಾಣೆಗಳಲ್ಲೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು ದೂರುಗಳನ್ನು ಪಡೆಯಲು ಕೌಂಟರ್ ರೀತಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಹಸಿರುವಲಯವಾಗಿದ್ದ ವೇಳೆ ನಿರಾಂತಕವಾಗಿದ್ದ ಜನರು ಈಗ ಬೆಚ್ಚಿ ಬೀಳುತ್ತಿದ್ದಾರೆ.