ಮಂಡ್ಯ: ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಆರೋಪಗಳು ಕೇಳಿ ಬರುತ್ತಲೇ ಇವೆ.ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದಿಂದ ಹಿಡಿದು, ಯಡಿಯೂರಪ್ಪ ಮತ್ತೆ ಸಿಎಂ ಆಗೋವರೆಗೂ ಹಾಗೂ ಉಪ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ತ್ಯಜಿಸಿ ಬಂದವರನ್ನ ಮತ್ತೆ ಗೆಲ್ಲಿಸುವವರೆಗೂ ವಿಜಯೇಂದ್ರ ಅವರ ಪಾತ್ರ ಪ್ರಮುಖವಾಗಿತ್ತು.
ಈ ನಡುವೆಯೇ, ಬಿ.ವೈ.ವಿಜಯೇಂದ್ರ ವಿರುದ್ಧ ಆಪರೇಷನ್ ಕಮಲದಲ್ಲಿ ಹಾಗೂ ಬಿಜೆಪಿ ಸೇರಿದವರಿಗೆ ಹಣದ ಆಮಿಷವನ್ನ ವಿಜಯೇಂದ್ರ ನೀಡಿದ್ದಾರೆ. ಸಿಎಂ ಅಧಿಕಾರದಲ್ಲಿ ವಿಜಯೇಂದ್ರರ ಹಸ್ತಕ್ಷೇಪ ಇದೆ. ಕೆಲವೊಂದು ಅಧಿಕಾರಿಗಳ ವರ್ಗಾವಣೆಯನ್ನ ಸಿಎಂ ಪುತ್ರನೇ ಮಾಡುತ್ತಿದ್ದಾರೆಂಬ ಆರೋಪಗಳು ವಿಜಯೇಂದ್ರ ವಿರುದ್ಧ ಕೇಳಿ ಬರ್ತಿದ್ವು.ಇದೀಗ ಸಕ್ಕರೆ ನಾಡು ಮಂಡ್ಯದಲ್ಲಿ ಭಾರೀ ಸುದ್ದಿಯಾಗ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದಲ್ಲೂ ವಿಜಯೇಂದ್ರ ಹೆಸರು ಥಳಕು ಹಾಕಿ ಕೊಂಡಿದೆ.
ವಿಜಯೇಂದ್ರರನ್ನ ಭೇಟಿಯಾದ ಬೇಬಿ ಗ್ರಾಮಸ್ಥರು:
ನಿನ್ನೆಯಷ್ಟೇ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕಿನ ಸಾಸಲು ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು.ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವಿಜಯೇಂದ್ರ ಅವರನ್ನ ಬೇಬಿ ಗ್ರಾಮಸ್ಥರು ಭೇಟಿಯಾಗಿದ್ದಾರೆ.ಈ ವೇಳೆ ತಮ್ಮ ಗ್ರಾಮದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನ ನಿಷೇಧಿಸಿ, ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಮನವಿ ಮಾಡಿದ್ದಾರೆ.ನಾವು ಈ ಹಿಂದೆ ನಿಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೂ ಬಂದಿದ್ದೆವು. ಅಪ್ಪಾಜಿ ಅವರನ್ನ ಭೇಟಿಯಾಗಿ, ಮನವಿ ಸಲ್ಲಿಸಿದ್ದೆವು.ಬೇಬಿ ಬೆಟ್ಟ ಸುತ್ತಮುತ್ತಲಿನ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆ ಆರ್.ಎಸ್ ಅಣೆಕಟ್ಟೆಗೆ ಅಪಾಯವಿದೆ ಅಂತಾ ಜಿಲ್ಲಾಡಳಿತ ಮತ್ತು ಸರ್ಕಾರ ಕಲ್ಲು ಗಣಿಗಾರಿಕೆ ನಿಷೇಧ ಮಾಡಿದೆ.ಆದರೂ, ಅವ್ಯಾಹತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇದೆ.
ಪಾಂಡವಪುರ ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜಾ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ರವೀಂದ್ರ ಅವರುಗಳು ಜೆಡಿಎಸ್ ಏಜೆಂಟ್ ರೀತಿ ವರ್ತನೆ ಮಾಡ್ತಿದ್ದಾರೆ. ಅವರೇ, ಅಕ್ರಮ ಕಲ್ಲು ಗಣಿಗಾರಿಕೆಗೆ ಪ್ರೋತ್ಸಾಹ ನೀಡ್ತಿದ್ದಾರೆ. ಇನ್ನು ಗಣಿ ಮಾಲೀಕರು ಕೂಡ ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ತರುವ ಮಾತಾಡ್ತಿದ್ದಾರೆ.ಈಗಾಗಲೇ ವಿಜಯೇಂದ್ರ ಅವರನ್ನ ಭೇಟಿ ಮಾಡಿದ್ದೇವೆ. ಅವರಿಗೆ 8-10ಕೋಟಿ ಹಣ ಕೂಡ ಕೊಟ್ಟಿದ್ದೇವೆ. 15ನೇ ತಾರೀಖಿನಿಂದ ಮತ್ತೆ ನಮ್ಮ ಕೆಲಸ ಶುರು ಮಾಡುತ್ತೇವೆ ಅಂತಿದ್ದಾರೆ ಅನ್ನೋ ಮಾಹಿತಿ ನೀಡಿದ್ರು.
ಒಂದು ರೂಪಾಯಿಯನ್ನೂ ನಾನು ಮುಟ್ಟಿಲ್ಲ:
ಗ್ರಾಮಸ್ಥರ ಮನವಿ ಆಲಿಸಿ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ದೇವಸ್ಥಾನದ ಎದುರು ನಿಂತಿದ್ದೀನಿ. ಒಂದು ರೂಪಾಯಿಯನ್ನೂ ನಾನು ಆ ರೀತಿ ಲಂಚ ಮುಟ್ಟಿಲ್ಲ. ಪದೇ ಪದೇ ಅದನ್ನೇ ಹೇಳಬೇಡಿ ಅಂದಿದ್ದಾರೆ.ದೇವಾಲಯದ ಮುಂದೆ ಬೇಬಿ ಗ್ರಾಮಸ್ಥರೆದುರು ಬಿ.ವೈ.ವಿಜಯೇಂದ್ರ ಮಾಡಿದ ಪ್ರಮಾಣದ ವಿಡಿಯೋ ವೈರಲ್ ಆಗ್ತಿದೆ.ಆ ವಿಡಿಯೋ ಮೂಲಕ ಬಿಜೆಪಿಗರು ಹಾಗೂ ಬಿಎಸ್ವೈ ಮತ್ತು ವಿಜಯೇಂದ್ರ ಅಭಿಮಾನಿಗಳು ವಿರೋಧಿಗಳಿಗೆ ತಿರುಗೇಟು ನೀಡ್ತಿದ್ದಾರೆ.
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.