ಹಾಸನ: 1 ಲಕ್ಷಕ್ಕೆ 5 ಲಕ್ಷ ಹಣ ಕೊಡುವುದಾಗಿ ನಂಬಿಸಿ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 20 ರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಆಡುವಳ್ಳಿ 1ನೇ ಕ್ರಾಸ್ ನಿವಾಸಿ ಶಾಹೀನಾ ಎಂಬುವರು ಕಂದಾಯ ಕಟ್ಟಲು ನಗರಸಭೆ ಬಳಿ ಹೋಗಿ ಪರಿಚಿತರೊಂದಿಗೆ ಮಾತನಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಎಂಟ್ರಿ ಕೊಟ್ಟ ಅನಾಮಿಕ ವ್ಯಕ್ತಿ ನಾನು ನಿಮ್ಮ ವಾರ್ಡ್‍ನ ಕೌನ್ಸಿಲರ್ ಸ್ನೇಹಿತ. ಇತ್ತೀಚೆಗೆ ಒಂದು ಹೊಸ ಸ್ಕೀಂ ಬಂದಿದೆ. ಅದು ಕೇವಲ 25 ಜನರಿಗೆ ಮಾತ್ರ. ಆ ಯೋಜನೆಯ ಲಾಭವೇನೆಂದರೆ ನೀವು ಒಂದು ಲಕ್ಷ ರೂ. ನೀಡಿದರೆ ನಾವು 5 ಲಕ್ಷ ರೂ. ಕೊಡುತ್ತೇವೆ ಎಂದು ಬಣ್ಣದ ಮಾತುಗಳನ್ನಾಡಿ ನಂಬಿಸಿದ. 1 ಲಕ್ಷಕ್ಕೆ 5 ಪಟ್ಟು ಹಣ ಸಿಗಲಿದೆ ಎಂಬ ಆಸೆಗೆ ಬಿದ್ದ ಮಹಿಳೆ ಓಕೆ ಎಂದು ಬಿಟ್ಟಳು. ಅಷ್ಟೇ ಅಲ್ಲ ಅನಾಮಿಕನಿಗೆ 1 ಲಕ್ಷ ರೂ. ಹಣ ಕೊಟ್ಟು ಆಧಾರ್ ಕಾರ್ಡ್ ಸಹ ನೀಡಿದ್ದಾರೆ.
ಕೆಲವೇ ಹೊತ್ತಿನಲ್ಲಿ 1 ಲಕ್ಷ ರೂ. ಸಿಕ್ಕಿದ್ದೇ ತಡ ಯಾರಿಗುಂಟು, ಯಾರಿಗಿಲ್ಲ ಎಂದು ಆಸಾಮಿ ಹಣ ಪಡೆದು ಪರಾರಿಯಾಗಿದ್ದಾನೆ. ಅದಾದ ಬಳಿಕ ಬಣ್ಣದ ಮಾತಿಗೆ ಮರುಳಾಗಿ ಹೋದ ಮಹಿಳೆ, ನನ್ನ ಹಣ ಕೊಡಿಸಿಕೊಡಿ ಎಂದು ನಗರಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.