ಚಿಕ್ಕೋಡಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದಲ್ಲಿ ಮಾ. 22ರಿಂದ ಮೇ 19ರವರೆಗೆ ಯಾವುದೇ ವಾಹನ ಸಂಚಾರ ಮಾಡದೇ ಇರುವುದರಿಂದ ಒಂದು ತಿಂಗಳಿಗೆ 20 ಕೋಟಿ ನಷ್ಟ ಆಗಿದೆ ಎಂದು ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ್ ಮಾಹಿತಿ ನೀಡಿದ್ದಾರೆ.
ನಗರದ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಮಾಹಿತಿ ನೀಡಿದ ಇವರು, ಮೇ. 20ರಿಂದ ಚಿಕ್ಕೋಡಿ ವಿಭಾಗದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗಿದೆ. ಈಗಾಗಲೇ ಈ ವಿಭಾಗದಿಂದ ಪ್ರತಿನಿತ್ಯ 45% ಬಸ್‌ಗಳು ಸಂಚಾರ ಪ್ರಾರಂಭಿಸಿದ್ದು, ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಇನ್ನೂ ಕೂಡ ಪಕ್ಕದ ಮಹಾರಾಷ್ಟ್ರಕ್ಕೆ ಬಸ್‌ಗಳ ಸಂಚಾರ ಪ್ರಾರಂಭಿಸಿಲ್ಲ. ಬರುವ ದಿನಗಳಲ್ಲಿ ಸರ್ಕಾರ ಅನುಮತಿ ನೀಡಿದರೆ ಮಹಾರಾಷ್ಟ್ರ ರಾಜ್ಯಕ್ಕೆ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದರು. ಪ್ರತಿನಿತ್ಯ ಮಹಾರಾಷ್ಟ್ರ ರಾಜ್ಯಕ್ಕೆ 175 ಬಸ್‌ಗಳು ಸಂಚರಿಸುತ್ತಿದ್ದವು. ಸುಮಾರು 35ರಿಂದ 40 ಸಾವಿರ ಪ್ರಯಾಣಿಕರು ಎರಡೂ ರಾಜ್ಯಗಳಲ್ಲಿ ಪ್ರಯಾಣಿಸುತ್ತಿದ್ದರು. ಲಾಕ್ಡೌನ್ಗಿಂತ ಮೊದಲು ಪ್ರತಿನಿತ್ಯ 60 ಲಕ್ಷ ಆದಾಯ ಬರುತ್ತಿತ್ತು. ಈಗ ಕೇವಲ 15 ಲಕ್ಷ ಆದಾಯ ಬರುತ್ತಿದೆ. ಇನ್ನೂ ಕೂಡ ಗ್ರಾಮೀಣ ಭಾಗದ ಜನರು ಬಸ್ ಸಂಚಾರ ಮಾಡುತ್ತಿಲ್ಲ. ಆದರೆ ಈಗಾಗಲೇ ಸಿಬ್ಬಂದಿ, ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದ ಪ್ರಯಾಣಿಕರು ಭಯ ಪಡುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಸಾರ್ವಜನಿಕರು ಬಸ್‌ನಲ್ಲಿ ಪ್ರಯಾಣಿಸಬಹುದು ಎಂದು ಹೇಳಿದರು. ಲಾಕ್ಡೌನ್ನಲ್ಲಿ ಚಿಕ್ಕೋಡಿ ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಒಟ್ಟು 47 ಕೋಟಿ ನಷ್ಟವಾಗಿದೆ. ಈಗಾಗಲೇ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸಲು ಪ್ರತಿಯೊಂದು ಡಿಪೋದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜನಸಂದಣಿ ಕಡಿಮೆಆಗಿರುವುದರಿಂದ ಜಿಲ್ಲೆಯಿಂದ ಜಿಲ್ಲೆಗೆ ಒಂದು ಗಂಟೆಗೆ ಒಂದರಂತೆ ಬಸ್‌ಗಳು ಪ್ರಯಾಣಿಸುತ್ತಿವೆ ಎಂದರು.