ರಾಮನಗರ: ಕೋವಿಡ್-19 ನಿಯಮ ಉಲ್ಲಂಘಿಸಿ ರೇಸಾರ್ಟ್ ನಲ್ಲಿ ಮದ್ಯ ಸೇವಿಸಿ ಮೋಜುಮಸ್ತಿ ಮಾಡುತ್ತಿದ್ದ 6 ಮಂದಿ ಯುವತಿಯರು ಸೇರಿ 26 ಮಂದಿಯನ್ನು ರಾಮನಗರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರ ರಾತ್ರಿ 09.30ರ ಸಮಯದಲ್ಲಿ ರಾಮನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅವ್ವೇರಹಳ್ಳಿ ಗ್ರಾಮದಲ್ಲಿರುವ ಕ್ಯೂ ಮ್ಯಾಂಗೋ ಪಾರೆಸ್ಟ್ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದಾಗ ಪಾರ್ಟಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕೋವಿಡ್-19 ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ರೆಸಾರ್ಟ್ ನಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮತ್ತು ಮಧ್ಯಪಾನ ಮಾಡಿಕೊಂಡು ಮೋಜು ಮಸ್ತಿ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು, 30 ಬಿಯರ್ ಸೇರಿದಂತೆ ಮದ್ಯದ ಬಾಟಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ರೆಸಾರ್ಟ್‌ನ ಪಾಲುದಾರರಾದ ಶಿವಲಿಂಗೇಗೌಡ ಮತ್ತು 19 ಜನ ಗಂಡಸರು ಹಾಗೂ 06ಯುವತಿಯರ ಮೇಲೆ ಮೊ.ನಂ.208/2020, ಕಲಂ 32,34 ಕೆ.ಇ ಆಕ್ಸ್ ಮತ್ತು 188, 269 ಐಪಿಸಿ ಜೊತೆಗೆ ಕಲಂ 51 (ಬಿ) ಡಿ.ಎಂ.ಅಸ್ಟ್-2005 ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತರು ಹೆಚ್ಚಿನವರು ಬೆಂಗಳೂರು ಮೂಲದವರೇ ಆಗಿದ್ದು, ಕೋವಿಡ್ ನಿಯಮ ಉಲ್ಲಂಘಿಸಿ ರೆಸಾರ್ಟ್ ಗೆ ಬಂದು ಮೋಜು ಮಸ್ತಿ ಮಾಡುತ್ತಿದ್ದರು.