Wednesday, December 18, 2024

3 ವರ್ಷಗಳ ಹಿಂದೆ ಲಾರ್ಡ್ಸ್​​ ಮೈದಾನದಲ್ಲಿ ಕೆ.ಎಲ್​ ರಾಹುಲ್​ ಮ್ಯಾಜಿಕ್​!

ಇಂಗ್ಲೆಂಡ್​ : ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಕೊನೆಯ ದಿನ 60 ಓವರ್​ಗಳ ಆಟದಲ್ಲಿ ಇಂಗ್ಲೆಂಡ್ ಮುಂದೆ 272 ರನ್​ಗಳ ಟಾರ್ಗೆಟ್​ ಇತ್ತು. ಅಂದಿನ (ಆಗಸ್ಟ್ 16, 2021) ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ತುಂಬಿದ ಆತ್ಮವಿಶ್ವಾಸ ಹೀಗಿತ್ತು. 52ನೇ ಓವರ್​ನಲ್ಲಿ ಇಂಗ್ಲೆಂಡ್ 120 ರನ್​ಗಳಿಗೆ ಮಕಾಡೆ ಮಲಗಿ ಬಿಟ್ಟಿತ್ತು. 3 ವರ್ಷಗಳ ಹಿಂದೆ ಕ್ರಿಕೆಟ್ ಕಾಶಿಯಲ್ಲಿ ಭಾರತದ ಗೆಲುವಿಗೆ ಮುನ್ನುಡಿ ಬರೆದವರು ವೀರಕನ್ನಡಿಗ ಕೆ.ಎಲ್ ರಾಹುಲ್.
ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್’ನ ವಿಶ್ವಶ್ರೇಷ್ಠ ಸ್ವಿಂಗ್ ದಾಳಿಯ ಮುಂದೆ ನೆಲ ಕಚ್ಚಿ ನಿಂತು ಶತಕ ಬಾರಿಸಲು ಸಾಮಾನ್ಯ ಧೈರ್ಯ, ಕೌಶಲ್ಯ ಸಾಕಾಗುವುದಿಲ್ಲ. ಆ ದಿನ ರಾಹುಲ್ ಲಾರ್ಡ್ಸ್’ನಲ್ಲಿ ಬಾರಿಸಿದ್ದ ಶತಕ ಭಾರತದ ಟೆಸ್ಟ್ ಇತಿಹಾಸದಲ್ಲೇ ಅತ್ಯುತ್ತಮ ಶತಕಗಳಲ್ಲಿ ಒಂದು.
ಅಂದು ಕ್ರಿಕೆಟ್ ಕಾಶಿಯಲ್ಲಿ ಶತಕ ಬಾರಿಸಿದ್ದ ಕೆ.ಎಲ್​ ರಾಹುಲ್, ಇಂದು ಎಲ್ಲಿದ್ದಾರೆ ನೋಡಿ! ದಿಲೀಪ್ ಟ್ರೋಫಿ ಪಂದ್ಯದಲ್ಲಿ ಶುಭಮನ್ ಗಿಲ್’ನ ನಾಯಕತ್ವದಡಿ ಆಡಬೇಕಾದ ಪರಿಸ್ಥಿತಿ ರಾಹುಲ್’ಗೆ ಎದುರಾಗಿದೆ. ತಪ್ಪೇನು ಇಲ್ಲ. ತನಗಿಂತ ಕಿರಿಯನ ನಾಯಕತ್ವದಡಿ ಆಡುವುದು ಅಪರಾಧವೇನಲ್ಲ. ಆದರೆ, ಭಾರತ ತಂಡದ ಭವಿಷ್ಯದ ನಾಯಕನೆಂದು ಬಿಂಬಿತನಾಗಿದ್ದ ಒಬ್ಬ ಕ್ರಿಕೆಟಿಗನಿಗೆ ಎದುರಾದ ದುಸ್ಥಿತಿಯ ಬಗ್ಗೆ ಬೇಸರ ಅಷ್ಟೇ. ಹಾಗಾದರೆ ಇದರಲ್ಲಿ ರಾಹುಲ್ ದೋಷ ಏನಿದೆ(?) ಆತ ಮಾಡಿದ ಪ್ರಮಾದವೇನು(?).
ಟಿ20 ಕ್ರಿಕೆಟ್’ನಲ್ಲಿ ರಾಹುಲ್’ನ ಬ್ಯಾಟಿಂಗ್ ಸ್ಟ್ರೈಕ್’ರೇಟ್ ಬಗ್ಗೆ ಪ್ರಶ್ನೆಗಳು ಇದ್ದೇ ಇವೆ. ಆದರೆ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್..? ಇವತ್ತಿನ ಮಟ್ಟಿಗೆ ರಾಹುಲ್ ODI ಮತ್ತು ಟೆಸ್ಟ್ ಕ್ರಿಕೆಟ್’ನಲ್ಲಿ ಮಾಧ್ಯಮ ಕ್ರಮಾಂಕದಲ್ಲಿ ಆಡಬಲ್ಲ ಅತ್ಯುತ್ತಮ ಬ್ಯಾಟ್ಸ್​ಮಾನ್. ಅನುಮಾನವಿದ್ದರೆ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್’ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಸ್ಕೋರ್ ಕಾರ್ಡ್ ತೆಗೆದು ನೋಡಿ. ಅದೂ ಸಾಕಾಗದಿದ್ದರೆ, ಕಳೆದ 5 ವರ್ಷಗಳಲ್ಲಿ ರಾಹುಲ್ ಆಡಿದ ಏಕದಿನ ಇನ್ನಿಂಗ್ಸ್’ಗಳ ದಾಖಲೆಯನ್ನೊಮ್ಮೆ ತೆಗೆದು ನೋಡಿ. ರಾಹುಲ್ ಆಟದ ಬಗ್ಗೆ ಮಾತನಾಡುವವರಿಗೆ ಅಲ್ಲೇ ಉತ್ತರ ಸಿಕ್ಕಿ ಬಿಡುತ್ತದೆ.
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸುವುದು ಹುಡುಗಾಟವಲ್ಲ. ಅದನ್ನು ರಾಹುಲ್ ಮಾಡಿದ್ದಾನೆ ಎಂದರೆ, ಆತ ವಲ್ಡ್​​ಕ್ಲಾಸ್​ ಎಂದೇ ಅರ್ಥ. ನೀನು ಆರಂಭಿಕನಾಗಿ ಆಡವುದು ಬೇಡ, ಮಧ್ಯಮ ಕ್ರಮಾಂಕದಲ್ಲಿ ಆಡು’’ ಎಂದಾಗ ಬೆರಳಲ್ಲಿ ತೋರಿಸಿದ್ದನ್ನು ತಲೆಯ ಮೇಲೆ ಹೊತ್ತು ಆಡಿದವನು ರಾಹುಲ್. ಟೆಸ್ಟ್ ಕ್ರಿಕೆಟ್’ನಲ್ಲಿ ನೀನು ವಿಕೆಟ್ ಕೀಪಿಂಗ್ ಮಾಡು’’ ಎಂದಾಗಲೂ ಅದನ್ನು ಶಿರಸಾವಹಿಸಿ ಪಾಲಿಸಿದವನು ರಾಹುಲ್. ದ್ರಾವಿಡ್ ಅವರಂತೆ ತಂಡಕ್ಕಾಗಿ ಯಾವುದೇ ಜವಾಬ್ದಾರಿ ನಿಭಾಯಿಸಲೂ ರಾಹುಲ್ ಹಿಂದೇಟು ಹಾಕಿದವರಲ್ಲ. ಇಂಥಾ ರಾಹುಲ್​ನನ್ನು ಈಗಿನ ಟೀಮ್ ಮ್ಯಾನೇಜ್​ಮೆಂಟ್​ ನಡೆಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ದೇಶೀಯ ಕ್ರಿಕೆಟ್ ಪಂದ್ಯವಾಡು ಎಂದಾಗಲೇ ಒಂದಂತೂ ಸ್ಪಷ್ಟ. ಇನ್ನೆಂದೂ ರಾಹುಲ್ ಭಾರತ ತಂಡದ ನಾಯಕನಾಗಲಾರ. ಪದೇ ಪದೇ ಗಾಯಗೊಳ್ಳುತ್ತಿರುವುದೇ ರಾಹುಲ್ ಕ್ರಿಕೆಟ್ ಕರಿಯರ್’ಗೆ ಮಾರಕವಾಗಿ ಬಿಟ್ಟಿದೆ. ಲೀಡರ್​ಶಿಫ್​ ರೋಲ್​ನಿಂದ ಅವಕಾಶದಿಂದ ರಾಹುಲ್ ವಂಚಿತನಾಗಲು ಇದೇ ಕಾರಣ. ಅಲ್ಲಿಗೆ. ಭಾರತ ತಂಡದ ನಾಯಕತ್ವ ರಾಹುಲ್ ಪಾಲಿಗೆ ಮುಗಿದ ಅಧ್ಯಾಯ. ತಂಡದಲ್ಲಿ ಇದ್ದಾನೆ ಎಂಬುದಷ್ಟೇ ಸಮಾಧಾನ.

RELATED ARTICLES

Related Articles

TRENDING ARTICLES