ಪ್ಯಾರಿಸ್ : ಮಗನಿಗೆ ಬುದ್ಧಿ ತಿಳಿಯುವ ಮುನ್ನವೇ ಪುಟ್ಟ ಕಂದನನ್ನು ತಂದೆ-ತಾಯಿ ಅನಾಥನನ್ನಾಗಿ ಮಾಡಿ ಹೊರಟು ಹೋಗಿದ್ದರು. ಮುಂದೇನು ಎಂಬ ಪ್ರಶ್ನೆಗೆ ಆ ಸಣ್ಣ ಹುಡುಗನಲ್ಲಿ ಉತ್ತರವಾದರೂ ಏನು? ಮುಂದೆ ತಬ್ಬಲಿ ಕಂದನನ್ನು ಅವರ ಅಜ್ಜ ಕಣ್ಣಲ್ಲಿ ಕಣ್ಣಿಟ್ಟು ಸಾಕಿದರು.
ಮಣ್ಣಿನಿಗೆ ಮೈಯೊಡ್ಡಿ ಉರುಳಾಡುತ್ತಾ ಕುಸ್ತಿ ಆಡುತ್ತಿದ್ದವನು ಮುಂದೆ ತನ್ನ ತವರಿನಿಂದ ಸುಮಾರು 95 ಕಿ.ಮೀ ದೂರದ ನವದೆಹಲಿಯ ಛತ್ರಸಾಲ್ ಕುಸ್ತಿ ಅಕಾಡೆಮಿ ಬಳಿ ಬಂದು ಸೇರುತ್ತಾರೆ. ಆ ಅಕಾಡೆಮಿಯ ಚರಿತ್ರೆ ಏನು? ಅದು ಸಾಕಷ್ಟು ಒಲಿಂಪಿಕ್ಸ್ ಪದಕ ವಿಜೇತರು ಗೆದ್ದು ಬಂದಿದ್ದ ಮಣ್ಣು. ಒಬ್ಬ ಸುಶೀಲ್ ಕುಮಾರ್, ಇನ್ನೊಬ್ಬ ಯೋಗೇಶ್ವರ್ ದತ್, ಮತ್ತೊಬ್ಬ ರವಿ ದಹಿಯಾ, ಮಗದೊಬ್ಬ ಭಜರಂಗ್ ಪುನಿಯಾ ಪದಕ ವಿಜೇತರು.
ಈ ನಾಲ್ವರು ಒಲಿಂಪಿಕ್ಸ್ ಪದಕ ವೀರರ ಗರಡಿಯಿಂದ ಬಂದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ತಲುಪಿದವನು ಅಮಾನ್ ಸೆಹ್ರಾವತ್! ಹರ್ಯಾಣದ ಝಜ್ಜರ್ ಜಿಲ್ಲೆಯ ಬಿರೋಹರ್ನವರು ಈ ಅಮಾನ್ ಸೆಹ್ರಾವತ್. ಈ ಅನಾಥ ಹುಡುಗನಿಗೆ ಆಶ್ರಯ ಕೊಟ್ಟಿದ್ದು ಕುಸ್ತಿ ಮ್ಯಾಟ್. ನಂತರ 18ನೇ ವರ್ಷಕ್ಕೆ ನ್ಯಾಷನಲ್ ಚಾಂಪಿಯನ್ ಆಗಿದ್ದರು. ಮುಂದೆ ಏಷ್ಯಾನ್ ಗೇಮ್ಸ್ 2022 – ಕಂಚು, ಏಷ್ಯಾನ್ ಚಾಂಪಿಯನ್ಶಿಪ್ 2023 – ಚಿನ್ನ, ವಲ್ಡ್ ಅಂಡರ್23 ಚಾಂಪಿಯನ್ಶಿಫ್ 2022 – ಚಿನ್ನ. ಈಗ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕದ ದೊರೆಯುವ ನಿರೀಕ್ಷೆ. ಗೆದ್ದು ಬರಲಿ ಎಂಬುದು ಕೋಟ್ಯಾಂತರ ಭಾರತೀಯರ ಹಾರೈಕೆ.