Wednesday, December 18, 2024

ಕಿಂಗ್​​ ಕೊಹ್ಲಿ ತುಳಿಯಲು ಯತ್ನಿಸಿದ್ದವರು ಯಾರು ಗೊತ್ತಾ?

ಒಬ್ಬರು ಬೆಳೆಯುತ್ತಿದ್ದಾರೆ ಅಂದ್ರೆ ಅವರನ್ನು ತುಳಿಯಲು ಹತ್ತಾರು ಮಂದಿ ನಿಂತು ಬಿಡುತ್ತಾರೆ. ತುಳಿಯಲು ನಿಂತವರನ್ನೇ ತುಳಿಯುತ್ತಾ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ದಾರಿ ತುಳಿದವರು ಕಿಂಗ್​ ಕೊಹ್ಲಿ. ಇಂಥಾ ವ್ಯಕ್ತಿಯನ್ನು ಅದೊಂದು ಕಾರಣ ನೀಡಿ ಬಗ್ಗಿಸಿದ್ದರು.

ಅಂದು ಯಾವ ನಿಯಮ ಅನುಸಾರ ವಿರಾಟ್ ಕೊಹ್ಲಿ ಕೈಯಿಂದ ನಾಯಕತ್ವವನ್ನು ಕಿತ್ತುಕೊಳ್ಳಲಾಗಿತ್ತೋ, ಅದೇ ನಿಯಮವನ್ನು ಕ್ರಿಕೆಟ್ ಬಾಸ್​ಗಳು ಈಗ ಕಾಲಡಿ ಹಾಕಿ ತುಳಿದು ಬಿಟ್ಟಿದ್ದಾರೆ. 2021ರಲ್ಲಿ ವಿರಾಟ್ ಕೊಹ್ಲಿ ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದಾಗ ಹಲವರು ಸಹಜವಾಗಿಯೇ ಹುಬ್ಬೇರಿಸಿದ್ದರು. ಭಾರತ ಕ್ರಿಕೆಟ್ ತಂಡದ ಮೋಸ್ಟ್​​ ಸಕ್ಸಸ್​ಫುಲ್​ ಕ್ಯಾಪ್ಟನ್​ (ಐಸಿಸಿ ಟ್ರೋಫಿ ಗೆಲ್ಲಲಿಲ್ಲ ಎಂಬುದನ್ನು ಬದಿಗಿಟ್ಟು) ಹೀಗೇಕೆ ಮಾಡಿದರು ಎಂಬ ಅಚ್ಚರಿ ಹಲವರಿಗೆ ಉಂಟು.

ಆದರೆ, ಕೊಹ್ಲಿ , ‘ನನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಟಿ20 ತಂಡದ ನಾಯಕತ್ವ ತ್ಯಜಿಸುತ್ತಿದ್ದೇನೆ’ ಎಂದಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಆಟಗಾರನಾಗಿದ್ದುಕೊಂಡು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ನಾಯಕನಾಗಿ ಮುಂದುವರಿಯುವುದು ವಿರಾಟ್ ಕೊಹ್ಲಿಯ ಲೆಕ್ಕಾಚಾರವಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ವಿರಾಟನ ತಲೆಯಿಂದ ಏಕದಿನ ನಾಯಕತ್ವದ ಕಿರೀಟವೂ ಕಳಚಿ ಬಿಟ್ಟಿತ್ತು. ಅಲ್ಲಲ್ಲ. ಆ ಕಿರೀಟವನ್ನು ಕಸಿದುಕೊಂಡು ಬಿಟ್ಟರು. ವಿರಾಟ್ ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗಿ ಮುಂದುವರಿಯಲು ಬಯಸಿದಾಗ ‘’ಇಲ್ಲ, ಇಲ್ಲ. ವೈಟ್ ಬಾಲ್ ಕ್ರಿಕೆಟ್’ನಲ್ಲಿ ಇಬ್ಬರು ನಾಯಕರಿರಲು ಸಾಧ್ಯವೇ ಇಲ್ಲ’’ ಎಂದ ಬಿಸಿಸಿಐ, ಕೊಹ್ಲಿ ಜೊತೆ ಚರ್ಚೆಯನ್ನೇ ನಡೆಸದೆ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ಬಿಟ್ಟಿತ್ತು. ಬಿಸಿಸಿಐನ ಏಕಪಕ್ಷೀಯ ನಿರ್ಧಾರದಿಂದ ನೊಂದುಕೊಂಡ ವಿರಾಟ್ 2022ರ ಜನವರಿ 16ರಂದು ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸಿ ಬಿಟ್ಟ. ಆದರೆ, ಈಗ…? ಟಿ20 ಹಾಗೂ ಏಕದಿನ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಕ ಮಾಡಲಾಗಿದೆ ಮತ್ತು ಇದು ಮುಂದಿನ ವರ್ಷದವರೆಗೆ ಮುಂದುವರಿಯಲಿದೆ.

ವೈಟ್​ ಬಾಲ್​ ಕ್ರಿಕೆಟ್​ಗೆ ಒಬ್ಬನೇ ನಾಯಕನಿರಬೇಕೆಂಬ ಬಿಸಿಸಿಐ ನಿಲುವು ಈಗೆಲ್ಲಿ ಹೋಯಿತು? ಅವತ್ತು ಇದೇ ಕಾರಣಕ್ಕೆ ಅಲ್ಲವೇ ಕೊಹ್ಲಿ ಕೈಯಿಂದ ಏಕದಿನ ತಂಡದ ನಾಯಕತ್ವವನ್ನು ಕಸಿದುಕೊಂಡದ್ದು? ಅಂದರೆ, ವಿರಾಟ್ ಕೊಹ್ಲಿಯನ್ನು ಹಣಿಯುವುದಕ್ಕೆಂದೇ 2 ವರ್ಷಗಳ ಹಿಂದೆ ಆ ನಿರ್ಧಾರ ತೆಗೆದುಕೊಳ್ಳಲಾಗಿತ್ತೇ?
ಅಂದು ಟಿ20 ನಾಯಕತ್ವ ತ್ಯಜಿಸುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ಜೊತೆ ಚರ್ಚಿಸಿರಲಿಲ್ಲ. ಏಕಾಏಕಿ ತನ್ನ ನಿರ್ಧಾರ ಪ್ರಕಟಿಸಿ ಬಿಟ್ಟಿದ್ದರು. ಬಿಸಿಸಿಐ ಕೂಡ ಅಷ್ಟೇ. ಕೊಹ್ಲಿಯನ್ನು ಏಕಾಏಕಿ ಏಕದಿನ ತಂಡದ ನಾಯಕತ್ವದಿಂದ ಕಿತ್ತು ಹಾಕಿತ್ತು. ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದವರು ಬಂಗಾಳದ ಹುಲಿ ಸೌರವ್ ಗಂಗೂಲಿ.  ನಾಯಕರಾಗಿದ್ದಾಗ ಪ್ರತೀ ಹಂತದಲ್ಲೂ ಆಟಗಾರರ ಬೆನ್ನಿಗೆ ನಿಲ್ಲುತ್ತಿದ್ದ, ಆಟಗಾರರಿಗಾಗಿ ಬಿಸಿಸಿಐ ಬಾಸ್​ಗಳನ್ನೇ ಎದುರು ಹಾಕಿಕೊಳ್ಳಲು ಹಿಂದೇಟು ಹಾಕದ ಗಂಗೂಲಿ, ಅದೇ ಬಿಸಿಸಿಐಗೆ ಬಾಸ್ ಆದಾಗ ತಾವೊಬ್ಬ ಕ್ರಿಕೆಟಿಗನೆಂಬುದನ್ನು ಮರೆತು ಶುದ್ಧ ಆಡಳಿತಗಾರನಾಗಿ ವರ್ತಿಸಿದ್ದರು. ಆ ದಿನ ವಿರಾಟ್ ಕೊಹ್ಲಿಯನ್ನು ಕರೆದು ‘’ಏನು ನಿನ್ನ ಸಮಸ್ಯೆ’’ ಎಂದು ಕೇಳುವ, ದಬಾಯಿಸುವ ಅಧಿಕಾರ ಮತ್ತು ಹಕ್ಕು ಸೌರವ್ ಗಂಗೂಲಿಯವರಿಗಿತ್ತು. ಕಾರಣ, ಅವರು ಭಾರತ ತಂಡದ ನಾಯಕರಾಗಿದ್ದಾಗ ಇಂಥದ್ದೇ ಸನ್ನಿವೇಶಗಳನ್ನು ಎದುರಿಸಿಕೊಂಡು ಬಂದಿದ್ದವರು. ಆದರೆ, ಗಂಗೂಲಿ ಹಾಗೆ ಮಾಡಲಿಲ್ಲ. ಇತ್ತ ವಿರಾಟ್ ಕೊಹ್ಲಿಯೂ ಹಠಕ್ಕೆ ಬಿದ್ದು ಬಿಟ್ಟ. ‘ಕರೆದು ಮಾತಾಡದ ಇವರ ಜೊತೆ ನಾನೇಕೆ ಮಾತಾಡಲಿ’ ಎಂಬ ಹಮ್ಮು ಅವರಿಗೆ.

ಅಲ್ಲಿಂದ ಶುರುವಾದ ಗಂಗೂಲಿ ಮತ್ತು ಕೊಹ್ಲಿಯ ಮನಸ್ತಾಪ ಎಲ್ಲಿಯವರೆಗೆ ಹೋಯಿತು ಎಂದರೆ ಐಪಿಎಲ್ ಪಂದ್ಯವೊಂದರಲ್ಲಿ ಇಬ್ಬರೂ ಎದುರು-ಬದುರಾದಾಗ ಮುಖ ತಿರುಗಿಸಿಕೊಂಡು ನಿಂತಿದ್ದರು. ಕಾಲ ಬದಲಾಗುತ್ತಿದ್ದಂತೆ ಬಿಸಿಸಿಐ ನಿಲುವು ಕೂಡ ಬದಲಾಗಿದೆ. ‘ಏಕದಿನ ತಂಡದ ನಾಯಕನಾಗಿ ಮುಂದುವರಿಯುತ್ತೇನೆ’ ಎಂದು ಕೊಹ್ಲಿ ಹೇಳಿದಾಗ, ವೈಟ್​ ಬಾಲ್​ ಕ್ರಿಕೆಟ್​ಗೆ ಒಬ್ಬನೇ ನಾಯಕನಿರಬೇಕೆಂದು ಹೇಳಿದ್ದವರು ವರಸೆ ಬದಲಿಸಿದ್ದಾರೆ. ಈಗ ಎರಡೂ ತಂಡಗಳಿಗೆ ಒಬ್ಬನೇ ನಾಯಕನನ್ನು ನೇಮಕ ಮಾಡುವ ಪರಿಸ್ಥಿತಿಯಲ್ಲಿ ಬಿಸಿಸಿಐ ಕೂಡ ಇಲ್ಲ. ಕಾರಣ, ರೋಹಿತ್ ಶರ್ಮಾ T20I ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಟಿ20 ತಂಡಕ್ಕೆ ಹೊಸ ನಾಯಕ ಬಂದಿದ್ದಾರೆ. ಹಾಗಂತ ಏಕದಿನ ತಂಡಕ್ಕೂ ಅವನನ್ನೇ ಕ್ಯಾಪ್ಟನ್ ಮಾಡುವ ಸ್ಥಿತಿಯಿಲ್ಲ. ಆದರೆ, ಇದೇ ನಿರ್ಧಾರವನ್ನೂ ಅವತ್ತೂ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ, ಹಾಗಾಗಲಿಲ್ಲ ಕಾರಣ, ಆಗ ಅದು ವಿರಾಟ್ ಕೊಹ್ಲಿಗೆ ಸಂಬಂಧಿಸಿದ ವಿಚಾರವಾಗಿತ್ತು. ಕೊಹ್ಲಿಯನ್ನು ಹಣಿಯಲೆಂದೇ ಕೆಲವರು ನಿರ್ಧಾರ ಮಾಡಿ ಬಿಟ್ಟಿದ್ದರು.

ಅಂದಹಾಗೆ, ‘ನಾಯಕ ಕೊಹ್ಲಿ’ಯನ್ನು ಹಣಿಯುವಲ್ಲಿ ಯಶಸ್ವಿಯಾದವರಿಗೆ ‘ಆಟಗಾರ ಕೊಹ್ಲಿ’ಯನ್ನು ಹಣಿಯಲು ಸಾಧ್ಯವೇ..? ಅದು ಇವರ ಹಣೆಯಲ್ಲೇ ಬರೆದಿಲ್ಲ ಬಿಡಿ.

RELATED ARTICLES

Related Articles

TRENDING ARTICLES