ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಎರಡೂ ಹಾಡುಗಳು ಪ್ರೇಕ್ಷಕರ ಮನ ಗೆದ್ದಿದೆ. ಆಗಸ್ಟ್ ಹದಿನೈದರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
“ದಂಡುಪಾಳ್ಯ” ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ಚಿತ್ರದ ಕಥೆ ಹೇಳಲು ಬರುತ್ತಿದ್ದಾರೆ ಎಂದಾಗ, ಅವರು ನನ್ನ ಜಾನರ್ ಬದಲಾಯಿಸುವ ಕಥೆ ಮಾಡಿರಬಹುದು ಅಂದುಕೊಂಡೆ. ಆದರೆ ಆರಂಭದಲ್ಲೇ ಅವರು ಎಂಟು ನಾಯಕಿಯರು ಎಂದಾಗ, ಓ ಇದು ನನ್ನ ಜಾನರ್ ನ ಚಿತ್ರ ಅನಿಸಿತು. “ಕೃಷ್ಣಂ ಪ್ರಣಯ ಸಖಿ” ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಟರೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು ಸಂತೋಷವಾಯಿತು. ನೋಡುಗರಿಗೂ ಈ ಚಿತ್ರ ಇಷ್ಟವಾಗುತ್ತದೆ. ಅಂತಹ ಉತ್ತಮ ಚಿತ್ರ ಮಾಡಿದ್ದಾರೆ ಶ್ರೀನಿವಾಸರಾಜು. ಪ್ರಶಾಂತ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ . “ಕೃಷ್ಣಂ ಪ್ರಣಯ ಸಖಿ” ನನ್ನ ಈವರೆಗಿನ ವೃತ್ತಿಜೀವನದ ಬಿಗ್ ಬಜೆಟ್ ನ ಚಿತ್ರ. ಆಗಸ್ಟ್ 15 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು ಗೋಲ್ಡನ್ ಸ್ಟಾರ್ ಗಣೇಶ್.
ಇದು ಗಣೇಶ್ ಅವರಿಗೆ ಸೂಕ್ತವಾದ ಕಥೆ. ಅವರ ಹಾಗೂ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳು ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ “ಚಿನ್ನಮ್ಮ” ಹಾಡಂತೂ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಆಗಸ್ಟ್ 15, ನಮ್ಮ ಚಿತ್ರ ತೆರೆ ಕಾಣಲಿದೆ. ನೋಡಿ ಹಾರೈಸಿ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದರು.
ಚಿತ್ರ ಉತ್ತಮವಾಗಿ ಮೂಡಿಬಂದಿರುವುದಕ್ಕೆ ನಿರ್ಮಾಪಕರ ಪುತ್ರಿ ಪ್ರೇರಣಾ ಪ್ರಶಾಂತ್ ಧನ್ಯವಾದ ತಿಳಿಸಿದರು. ನಾಯಕಿಯರಾದ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಿವಧ್ವಜ್, ಗಿರಿ ಮುಂತಾದವರು “ಕೃಷ್ಣಂ ಪ್ರಣಯ ಸಖಿ” ಚಿತ್ರದ ಕುರಿತು ಮಾತನಾಡಿದರು.