ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಗುರುವಾರ ರಿಲೀಸ್ ಆಗಿ ಬಹಳಷ್ಟು ಸದ್ದು ಮಾಡುತ್ತಿದೆ. ಎಲ್ಲ ವರ್ಗದ ಪ್ರೇಕ್ಷಕರಿಂದಲೂ ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲದೆ ಸೆಲೆಬ್ರಿಟಿಗಳು ಸಹ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಳ್ಳುತ್ತಿದ್ದಾರೆ.
ಅಪರೂಪಕ್ಕೆ ಟ್ವೀಟ್ ಮಾಡುವ ನಟ ಯಶ್ ಇದೀಗ ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಿ ಸಿನಿಮಾ ಬಗ್ಗೆ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ‘ಕಣ್ಣಿಗೆ ಹಬ್ಬವಾಗುವ ರೀತಿ ಅದ್ಭುತ ದೃಶ್ಯಗಳನ್ನು ಕಟ್ಟಿಕೊಟ್ಟಿರುವ ‘ಕಲ್ಕಿ 2898 ಎಡಿ’ ಚಿತ್ರತಂಡಕ್ಕೆ ಶುಭಾಶಯಗಳು. ಈ ಸಿನಿಮಾವು ಹೆಚ್ಚು ಸೃಜನಶೀಲವಾಗಿ ಕತೆಗಳನ್ನು ಹೇಳಲು ದಾರಿ ತೋರಿಸಿಕೊಟ್ಟಿದೆ. ನಿರ್ದೇಶಕ ನಾಗ್ ಅಶ್ವಿನ್ ಮತ್ತು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್, ಸಿನಿಮಾ ಮಂದಿ ದೊಡ್ಡದಾಗಿ ಕನಸು ಕಂಡು ದೊಡ್ಡ ಹೆಜ್ಜೆಗಳನ್ನು ಇಡಲು ಧೈರ್ಯ ಕೊಟ್ಟಿದೆ’ ಎಂದಿದ್ದಾರೆ.
ಇದನ್ನೂ ಓದಿ:ನಿರ್ಮಾಪಕನಿಗೆ ತಲೆನೋವಾದ ಬಡ್ಡಿ ದಂಧೆಕೋರರ ಕಾಟ
ಮುಂದುವರೆದು, ‘ಡಾರ್ಲಿಂಗ್ ಪ್ರಭಾಸ್, ಅಮಿತಾಬ್ ಬಚ್ಚನ್ ಸರ್, ಕಮಲ್ ಹಾಸನ್ ಸರ್ ಮತ್ತು ದೀಪಿಕಾ ಪಡುಕೋಣೆ ಹಾಗೂ ಕೆಲವು ಸರ್ಪ್ರೈಸಿಂಗ್ ಕ್ಯಾಮಿಯೋ ಒಟ್ಟಿಗೆ ನೋಡುವುದು ಒಂದು ಅದ್ಭುತವಾದ ಅನುಭವ. ಇಂಥಹಾ ಒಂದು ಅದ್ಭುತವಾದ ಸಿನಿಮಾವನ್ನು ಪ್ರೇಕ್ಷಕರ ಎದುರು ತಂದ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು, ಈ ಸಿನಿಮಾ ನಿಜಕ್ಕೂ ಬೆಳ್ಳಿತೆರೆಯನ್ನು ಬೆಳಗಿಸುತ್ತಿದೆ’ ಎಂದಿದ್ದಾರೆ.