Sunday, January 12, 2025

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮಲೆನಾಡಿನ ರೈತರ ಆಕ್ರೋಶ.

 ಶಿವಮೊಗ್ಗ : ಮಲೆನಾಡಿನ ರೈತರು, ರಾಜ್ಯ ಸರ್ಕಾರದ ವಿರುದ್ಧ ಸಿಟ್ಟಿಗೆದ್ದಿದ್ದಾರೆ.  ರೈತ ಕುಲವೇ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ಆಹಾರ ಭದ್ರತೆಗೆ ಅಪಾಯ ತಂದೊಡ್ಡಲಿದೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.  ಉಳುವವನೇ ಭೂ ಒಡೆಯ ಕಾಯ್ದೆಯ ತದ್ವಿರುದ್ಧವಾದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಇದೀಗ ಮಲೆನಾಡಿನ ರೈತರು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಾಮಾಜಿಕ ಕಲ್ಪನೆಯಡಿಯಲ್ಲಿ, ಉಳುವವನೇ ಭೂ ಒಡೆಯ ಎಂದು ಹೇಳಿ, ಉಳುವವನಿಗೆ ಭೂಮಿ ನೀಡಿ, ಒಬ್ಬ ರೈತ ಜಮೀನು ಹೊಂದಲು ಮಿತಿ ಹಾಕಿ ಕಾಯ್ದೆ ರೂಪಿಸಲಾಗಿತ್ತು.  ಯಾವೊಬ್ಬ ಉಳ್ಳವರು, ಬಂಡವಾಳಶಾಹಿಗಳು ಕೂಡ, ಭೂಮಿ ಖರೀದಿ ಮಾಡಿ, ಸಣ್ಣ ಮತ್ತು ಅತಿ ಸಣ್ಣ ರೈತರು ನರಳುವಂತಾಗದಂತೆ, ಕಾಯ್ದೆ ರೂಪಿಸಿ, ನೋಡಿಕೊಳ್ಳಲಾಗಿತ್ತು.  ಆದ್ರೆ, ಇದೀಗ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಈ ಕಾಯ್ದೆ ವಿರೋಧಿಸಿ, ಮಲೆನಾಡಿನ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಈ ಕಾಯ್ದೆ ಜಾರಿಗೆ ತಂದು, ರೈತರಲ್ಲದವರು, ಭೂಮಿ ಖರೀದಿಸಿ, ಆಹಾರ ಭದ್ರತೆಗೆ ಅಪಾಯವಾಗಲಿದೆ ಎಂಬ ಆತಂಕವನ್ನ ಮಲೆನಾಡಿನ ರೈತರು ವ್ಯಕ್ತಪಡಿಸುತ್ತಿದ್ದಾರೆ.  ಹೌದು, ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ರೈತರಲ್ಲದವರು ಭೂಮಿ ಖರೀದಿಸಲು ಕಾನೂನು ಮಾಡಿರುವುದು ರೈತ ಕುಲವೇ ನಾಶವಾಗಿ, ಆಹಾರ ಭದ್ರತೆಗೆ ಅಪಾಯ ತಂದೊಡ್ಡಲಿರುವುದರಿಂದ ಕೂಡಲೇ ಈ ನಿರ್ಧಾರ ಹಿಂಪಡೆಯಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.  ರೈತರಲ್ಲದವರು ಕೃಷಿ ಭೂಮಿ ಕೊಳ್ಳಲು ಈ ಹಿಂದೆ ಇದ್ದ 25 ಲಕ್ಷ ರೂ. ಆದಾಯ ಮಿತಿಯನ್ನು ತೆಗೆದು ಹಾಕಿರುವುದು, ಉಳುವವನೇ ಭೂ ಒಡೆಯ ಕಾಯ್ದೆಗೆ ತದ್ವಿರುದ್ದವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.  ಈ ಕಾಯ್ದೆ ತಿದ್ದುಪಡಿ, ಕಾರ್ಪೋರೇಟ್ ಕಂಪನಿಗಳಿಗೆ, ಗುತ್ತಿಗೆ ಕೃಷಿ ಕಾಯ್ದೆಗೆ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲವಾಗುತ್ತದೆಯೇ ವಿನಃ ನಿಜವಾದ ಕೃಷಿಕರಿಗಲ್ಲ.  ಜೊತೆಗೆ ನಷ್ಟದಲ್ಲಿರುವ ಕೃಷಿಯನ್ನು ಮಾಡಲು ಈಗಿನ ಯುವಕರು ಕೂಡ, ಮುಂದೆ ಬರುವುದಿಲ್ಲ ಎಂಬ ಸತ್ಯದ ನಡುವೆ ಈ ಕಾಯ್ದೆ ತಿದ್ದುಪಡಿ ಬಗ್ಗೆ ರೈತ ಮುಖಂಡರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಹಿಂದೆ ಸಾಮಾಜಿಕ ಕಲ್ಪನೆಯಡಿ ಉಳುವವನಿಗೆ ಭೂಮಿ ಕೊಡುವುದು ಮತ್ತು ಒಬ್ಬ ರೈತ ಜಮೀನು ಹೊಂದಲು ಮಿತಿ ಹಾಕಿ ಕಾಯ್ದೆ ರೂಪಿಸಲಾಗಿತ್ತು.  ಆದರೆ ಇದೀಗ ರಾಜ್ಯ ಸರ್ಕಾರ, ಈ ಕಾಯ್ದೆ ತಿದ್ದುಪಡಿ ಮಾಡಿದ್ದು, ಇದೀಗ, ಹಣವುಳ್ಳವರು, ಬಹುತೇಕ ಕಪ್ಪು ಹಣವಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ಥರು, ಜೊತೆಗೆ ದೊಡ್ಡ ದೊಡ್ಡ ಉದ್ದಿಮೆದಾರರು, ಕೋಟ್ಯಾಧೀಶರು, ಎಕರೆಗೆ ಮಾರುಕಟ್ಟೆಯಲ್ಲಿ 50ಲಕ್ಷ ಬೆಲೆ ಬಾಳುವ ಭೂಮಿಯನ್ನು ರಿಜಿಸ್ಟರ್ ಕಛೇರಿಯ ಬೆಲೆ 10 ಲಕ್ಷ ರೂಪಾಯಿ ನಮೂದಿಸಿಕೊಂಡು, ಕಪ್ಪು ಹಣ ಚಲಾವಣೆ ಮಾಡಲು ಈ ಕಾಯ್ದೆ ಅನುಕೂಲ ಮಾಡಿಕೊಟ್ಟಂತಾಗಿದೆ. 

ಅದರಂತೆ, ದೊಡ್ಡ ದೊಡ್ಡ ಬಂಡಾವಾಳ ಶಾಹಿಗಳು ಭೂಮಿ ಖರೀದಿ ಮಾಡಲು ಮುಂದಾಗುವುದರಿಂದ ಭೂಮಿ ಬೆಲೆ ಹೆಚ್ಚಾಗುತ್ತದೆ.  ಶೇ. 80 ಭಾಗವಿರುವ, ಸಣ್ಣ ಮತ್ತು ಅತೀಸಣ್ಣ ರೈತರು ಮೊದಲೇ ಸಾಲದಲ್ಲಿ ನರಳುತ್ತಿರುವುದರಿಂದ ಖಾಸಗಿ, ಫೈನಾನ್ಸ್ ಮತ್ತು ಬ್ಯಾಂಕ್, ಸೊಸೈಟಿ ಸಾಲಗಾರರ ಕಿರುಕುಳಕ್ಕೆ ಹೆದರಿ ಭೂಮಿಯನ್ನು ಮಾರಿಕೊಂಡು ಕೃಷಿ ಕಾರ್ಮಿಕರಾಗುತ್ತಾರೆ ಎಂಬ ಅಸಮಾಧಾನ  ರೈತರದ್ದಾಗಿದೆ.  ಅಲ್ಲದೇ, ಈ ತಿದ್ದುಪಡಿ ಕಾಯ್ದೆ ಜಾರಿಯಾದರೆ, ರಿಯಲ್ ಎಸ್ಟೇಟ್, ಖಾಸಗಿ ಶಾಲೆಗಳು, ಆಸ್ಪತ್ರೆಗಳು, ಮೋಜುಮಸ್ತಿಗಾಗಿ ರೆಸಾರ್ಟ್‍ಗಳು ತಲೆ ಎತ್ತುವುದರಿಂದ ಕೃಷಿ ಭೂಮಿ ನಾಶವಾಗಿ ಆಹಾರದ ಅಭಾವ ತಲೆದೋರುತ್ತದೆ.  ಆಹಾರ ಭದ್ರತೆ ಕಲ್ಪನೆ ನಾಶವಾಗಿ ಮುಂದೊಂದು ದಿನ ಆಹಾರದ ಕೊರತೆ ಉಂಟಾಗಬಹುದು. ಭೂಮಿ ಮಾರಾಟ ಮಾಡಿದ ರೈತರ ಮುಂದಿನ ಪರಿಸ್ಥಿತಿ ಮಾತ್ರ ಚಿಂತಾಜನಕವಾಗುವುದಂತೂ ಸತ್ಯ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.

 

 

RELATED ARTICLES

Related Articles

TRENDING ARTICLES