ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 34 ಪ್ರಕರಣಗಳು ಪತ್ತೆಯಾಗಿವೆ. ಇಂದು ಬೆಳಗ್ಗಿನ ಹೆಲ್ತ್ ಬುಲೆಟಿನ್ ಪ್ರಕಾರ 5 ಕೇಸ್ಗಳು ಪತ್ತೆಯಾಗಿದ್ದವು, ಸಂಜೆಯಾಗುತ್ತಲೇ ಅದಕ್ಕೆ 29 ಕೇಸ್ಗಳು ಸೇರಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 635 ಕೇಸ್ಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆ 25 ಕ್ಕೇರಿಕೆಯಾಗಿದೆ.
ಇಂದು ಸಂಜೆಯ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರಿನಲ್ಲಿ 4 ಕೇಸ್ ಪತ್ತೆಯಾಗಿದೆ. ಬಿಬಿಎಂಪಿ ಕಂಟೈನ್ಮೆಂಟ್ ಝೋನ್ಗೆ ತೆರಳಿದ್ದರಿಂದ 24 ವರ್ಷದ ಪುರುಷನಿಗೆ ಸೋಂಕು ಹರಡಿದೆ. ಇನ್ನುಳಿದ ಮೂವರು ಸೋಂಕಿತರು ಮಹಿಳೆಯರಾಗಿದ್ದು, ಪೇಷೆಂಟ್ ನಂ 350 ರ ವ್ಯಕ್ತಿಯಿಂದ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.
ಕಲಬುರಗಿಯಲ್ಲಿ ಇಂದು ಒಟ್ಟು ಆರು ಪ್ರಕರಣಗಳು ಪತ್ತೆಯಾಗಿದ್ದು, ಬೆಳಗ್ಗೆ ಮೂರು ಹಾಗೂ ಸಂಜೆ ಮೂರು ಪ್ರಕರಣಗಳು ದಾಖಲಾಗಿದೆ. 35 ವರ್ಷದ ಮಹಿಳೆ, 78 ವರ್ಷದ ಪುರುಷ ಹಾಗೂ 22 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕು ತಗುಲಿರುವ ಮೂಲಗಳನ್ನು ಪತ್ತೆಹಚ್ಚಲಾಗುತ್ತಿದೆ.
ಬಾಗಲೋಟೆಯಲ್ಲಿ ಇಂದು 3ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಎರಡು ಪ್ರಕರಣಗಳು ಬೆಳಗ್ಗೆ ಮುಧೋಳದಲ್ಲಿ ಹಾಗೂ ಒಂದು ಕೇಸ್ ಸಂಜೆ ಬಾದಾಮಿಯಲ್ಲಿ ಪತ್ತೆಯಾಗಿದೆ. ಸಂಜೆ ಪತ್ತೆಯಾದ ಪ್ರಕರಣದ ಮೂಲದ ಬಗ್ಗೆ ಯಾವುದೇ ಮಾಹಿತಿಗಳು ಇಲ್ಲ.
ಇನ್ನು ದಾವಣಗೆರೆಯಲ್ಲಿ ಇಂದು ಒಂದೇ ದಿನ 21 ಕೇಸ್ಗಳು ಪತ್ತೆಯಾಗಿದ್ದು, ಸೋಂಕಿತ ವೃದ್ಧ ಹಾಗೂ ನರ್ಸ್ನಿಂದಲೇ ಈ 21 ಜನರಿಗೂ ಸೋಂಕು ಹರಡಿರುತ್ತದೆ.