ನವದೆಹಲಿ : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹಿರಿಯ ವಕೀಲ ಫಾಲಿ ನಾರಿಮನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ದೆಹಲಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೇ ಅವರ ಅಂತಿಮ ದರ್ಶನ ಪಡೆಯಬೇಕಿತ್ತು. ಅನಾರೋಗ್ಯ ಹಿನ್ನೆಲೆ ಅವರ ಸಲಹೆ ಮೇರೆಗೆ ಅಂತಿಮ ದರ್ಶನ ಪಡೆದಿದ್ದೇನೆ ಎಂದು ಹೇಳಿದರು.
ಫಾಲಿ ನಾರಿಮನ್ ಖ್ಯಾತ ವಕೀಲರಾಗಿ ವಿಶೇಷವಾಗಿ ಕರ್ನಾಟಕ ರಾಜ್ಯದ ನೀರಾವರಿ ಸಮಸ್ಯೆಗೆ ಹೋರಾಟ ನಡೆಸಿದ್ದರು. ರಾಜ್ಯದ ಪರವಾಗಿ ಅತ್ಯಂತ ಪ್ರಾಮಾಣಿಕವಾಗಿ ಶ್ರಮ ಪಟ್ಟಿದ್ದರು. ದೇವೇಗೌಡರಿಗೂ ಅವರಿಗೆ ಅವಿನಾಭಾವ ಸಂಬಂಧ ಇದೆ. ರಾಜ್ಯದ ಕಾವೇರಿ, ಕೃಷ್ಣ ನೀರಾವರಿ ವಿಚಾರದಲ್ಲಿ ಅವರಿಂದ ಸಲಹೆ ಪಡೆಯುವಲ್ಲಿ ಹೆಚ್ಚಿನ ಸಮಯ ಕಳೆದಿದ್ದಾರೆ ಎಂದು ಹಳೆಯ ನೆನಪು ಮೆಲುಕು ಹಾಕಿದರು.
ಸಿದ್ದರಾಮಯ್ಯ ಗೌರವ ಸಲ್ಲಿಸಬೇಕಿತ್ತು
ನಾರಿಮನ್ ಅವರಿಗೆ ರಜ್ಯದ ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ಸಲ್ಲಿಸಬೇಕಿತ್ತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ರಾಜ್ಯದ ಪರವಾಗಿ ಅಂತಿಮ ನಮನ ಸಲ್ಲಿಸಬೇಕಿತ್ತು. ರಾಜ್ಯದ ರೈತರನ್ನು ಉಳಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದಕ್ಕೆ ನಾರಿಮನ್ ಅವರಿಗೆ ಗೌರವ ಸಲ್ಲಿಸಬೇಕು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪುತ್ರ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಮತ್ತಿತರ ಮುಖಂಡರು ಇದ್ದರು.