ಶಿವಮೊಗ್ಗ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಕತ್ತೆ ಥರ ದುಡಿಯುತ್ತಿದ್ದೇನೆ. ಪಕ್ಷ ಅವಕಾಶ ಕೊಟ್ಟರೆ ಚುನಾವಣೆ ನಿಲ್ಲುತ್ತೇನೆ. ಈ ಬಗ್ಗೆ ನನಗೆ ಏನು ಹೇಳಿಲ್ಲ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಈ ಸಮಾವೇಶಗಳು ಪ್ರಚಾರವೇ ಹೌದು. ಇಲ್ಲ ಎಂದು ನಾನೇಕೆ ಹೇಳಲಿ. ನಾನು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಮತ್ತೆ ಬರುತ್ತೇನೆ. ಉಚಿತ ಗ್ಯಾರಂಟಿ ಇಟ್ಟಿದ್ದೇವೆ, ಆ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದವರು ಕಂಡಮ್ ಆಗ್ತಾರೆ
ಅಧಿಕಾರಕ್ಕಾಗಿ, ಚುನಾವಣೆಗಾಗಿ ಈ ಸಮಾವೇಶ ಅಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ನವರು ಕಮಿಷನ್ ತಿನ್ನುತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ನಾನು ಜನರಿಗೆ ಕೇಳಿದ್ನಲ್ಲ. ಯಾರಾದರೂ ಹೇಳಿದ್ರಾ ಕಮಿಷನ್ ಕೊಡುತ್ತಿದ್ದೇವೆ ಅಂತ. ಯಾರು ವಿರೋಧ ಪಕ್ಷದವರು ಕಂಡಮ್ ಮಾಡುತ್ತಾರೆ, ಅವರೇ ಕಂಡಮ್ ಆಗ್ತಾರೆ ಎಂದು ವಿಜಯೇಂದ್ರ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
ವಿಪಕ್ಷದವರು ಸಮಾರಂಭಕ್ಕೆ ಬರಬೇಕಿತ್ತು
ರಾಜ್ಯಾದ್ಯಂತ ಪಕ್ಷದಿಂದ ಸಮಾರಂಭಗಳು ನಡೆಯುತ್ತಿವೆ. ವಿಪಕ್ಷಗಳ ಟೀಕೆಗಳಿಗೆ ಈ ಸಮಾವೇಶ ಉತ್ತರ ನೀಡುತ್ತದೆ. ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರು ಬರಬೇಕಿತ್ತು. ಇದು ಪಕ್ಷದ ಸಮಾರಂಭ ಅಲ್ಲ, ಸರ್ಕಾರದ ಕಾರ್ಯಕ್ರಮ. ಆದರೆ, ಅವರು ಬಂದಿಲ್ಲ ಎಂದು ಮಧು ಬಂಗಾರಪ್ಪ ಕುಟುಕಿದ್ದಾರೆ.