ಹರಿಯಾಣ : ಪ್ರಭು ಶ್ರೀರಾಮ ಕಾಲ್ಪನಿಕ ಎಂದವರು ಹಾಗೂ ರಾಮಮಂದಿರ ನಿರ್ಮಾಣ ನಿರೋಧಿಸಿದ್ದವರು ಈಗ ‘ಜೈ ಸಿಯಾ ರಾಮ’ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಹರಿಯಾಣದ ರೇವಾರಿಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶಾಖೆಗೆ ಶಿಲನ್ಯಾಸ ಹಾಗೂ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ದೇಶದ ಜನರ ಆಶೀರ್ವಾದದಿಂದ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೀಟುಗಳಿಗೆ ಮಹತ್ವ ಇದೆ. ಆದರೆ, ಜನರ ಆಶೀರ್ವಾದವೇ ನನ್ನ ಪಾಲಿಗೆ ದೊಡ್ಡ ಆಸ್ತಿ ಎನ್ನುವ ಮೂಲಕ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು.
ರಾಮಮಂದಿರ ನಿರ್ಮಾಣ ಜನರ ಇಚ್ಛೆ
ಪ್ರಧಾನಿ ಅಭ್ಯರ್ಥಿಯಾಗಿ ನಾನು ನಿಮಗೆ ಕೆಲವು ಭರವಸೆಗಳನ್ನು ನೀಡಿದ್ದೆನು. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ದೇಶದ ಜನರ ಇಚ್ಛೆಯಾಗಿತ್ತು. ಜನರ ಆಶಯವನ್ನು ಪೂರೈಸಲಾಗಿದೆ ಎಂದು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಈ ಗೌರವ ಮೋದಿಗೆ ಮಾತ್ರ ಸಲ್ಲುವುದಿಲ್ಲ
ವಿಶ್ವದೆಲ್ಲೆಡೆ ಭಾರತಕ್ಕೆ ಅಪಾರ ಗೌರವ ಸಿಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸಿಗುತ್ತಿರುವ ಈ ಗೌರವ ಮೋದಿಗೆ ಮಾತ್ರ ಸಲ್ಲುವುದಿಲ್ಲ. ಬದಲಾಗಿ ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತದೆ ಎಂದು ಪ್ರಧಾನಿ ಮೋದಿ ವಿಶ್ಲೇಷಿಸಿದರು. ಪ್ರಧಾನಿ ಮೋದಿಯವರು ಇತ್ತೀಚೆಗೆ ಯುಎಇಗೆ ಭೇಟಿ ನೀಡಿ ಅರಬ್ಬರ ನೆಲದಲ್ಲಿ ಮೊದಲ ಹಿಂದೂ ದೇಗುಲ ಉದ್ಘಾಟಿಸಿದ್ದರು.