ಬೆಂಗಳೂರು : ಏನಿಲ್ಲ.. ಏನಿಲ್ಲ.. ಬಿಜೆಪಿ ನಾಯಕರ ತಲೆಯಲ್ಲಿ ಏನೇನು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಮಂಡನೆ ವೇಳೆ ವಿರೋಧ ಪಕ್ಷದ ನಾಯಕರು ಸಭಾತ್ಯಾಗ ಮಾಡಿದ ಉದಾಹರಣೆಯೇ ಇರಲಿಲ್ಲ ಎಂದು ಕುಟುಕಿದ್ದಾರೆ.
ಸುನೀಲ್ ಕುಮಾರ್ ಏನಿಲ್ಲ.. ಏನಿಲ್ಲ.. ಅಂತಾರೆ. ಅವರ ತಲೆಯಲ್ಲಿ ಏನೂ ಇಲ್ಲ. ಕಾಮಾಲೆ ಕಣ್ಣಿರೋರಿಗೆ ಕಾಣೋದೆಲ್ಲಾ ಹಳದಿ. ಟೀಕೆ ಮಾಡಬೇಕು ಅಂತಲೇ ಅವರು ಟೀಕೆ ಮಾಡುತ್ತಾರೆ. ಮೊದಲು ಏನಿಲ್ಲ.. ಏನಿಲ್ಲ.. ಅಂದ್ರು. ಆಮೇಲೆ ಪ್ಲೇಕಾರ್ಡ್ ಹಿಡಿದುಕೊಂಡು ಬಂದಿದ್ದಾರೆ. ಅಂದ್ರೆ ಪ್ಲ್ಯಾನ್ ಮಾಡಿಕೊಂಡು ಬಂದಿದ್ದಾರೆ ಅಂತ ಅಲ್ವಾ..? ಎಂದು ಚಾಟಿ ಬೀಸಿದ್ದಾರೆ.
5,300 ಕೋಟಿಯಲ್ಲಿ ಒಂದು ಪೈಸೆಯೂ ಕೊಟ್ಟಿಲ್ಲ
ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದರಂತೆ. ಸತ್ಯ ಹೇಳಿದ್ರೆ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದ್ದರೂ ಸುಮ್ಮನೆ ಕೂರಬೇಕಾ..? ನಿರ್ಮಲಾ ಸೀತಾರಾಮನ್ ಮುದೆ ಕೂರಿ ಅನ್ನೋದು ತಪ್ಪಾ..? ಅಪ್ಪರ್ ಭದ್ರಾಗೆ ಹಣ ಕೊಡ್ತೀವಿ ಅಂತ ನಾವ್ ಹೇಳಿದ್ವಾ..? ನ್ಯಾಶನಲ್ ಪ್ರಾಜೆಕ್ಟ್ ಮಾಡೋದಾಗಿ ಹೇಳಿದ್ದು ಇವರೇ.. 5,300 ಕೋಟಿಯಲ್ಲಿ ಒಂದು ಪೈಸೆಯೂ ಕೊಟ್ಟಿಲ್ಲ ಎಂದು ಹರಿಹಾಯ್ದಿದ್ದಾರೆ.
ರಾಜ್ಯದ ಏಳು ಕೋಟಿ ಜನರಿಗೆ ಅನ್ಯಾಯವಾಗಿದೆ
ರಾಜ್ಯದ ಏಳು ಕೋಟಿ ಜನರಿಗೆ ಅನ್ಯಾಯವಾಗಿದೆ. ಅದನ್ನ ತಿಳಿಸೋದು ನಮ್ಮ ಜವಾಬ್ದಾರಿ. ಕೋಲೆ ಬಸವನ ಥರ ತಲೆ ಅಲ್ಲಾಡಿಸೋದನ್ನ ಅವರು ಬಿಡಬೇಕು. ಆ ಕೋಲಾರ ಎಂಪಿ ಯಾವತ್ತಾದರೂ ಬಾಯಿ ಬಿಟ್ಟಿದ್ದಾನಾ..? ಐದು ವರ್ಷದಲ್ಲಿ ಒಂದು ಬಾರಿಯಾದರೂ ಮಾತನಾಡಿದ್ದಾರಾ..? ಎಂಪಿ ಆಗೋಕೆ ಅವರು ಲಯಕ್ಕಾ..? ನಾಲಾಯಕ್ಕಾ..? ನೀವೆ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.