ಬೆಂಗಳೂರು: ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೋಗಿ ಚೀನಾದಿಂದ ಬೆಂಗಳೂರಿಗೆ ಆಗಮಿಸಿದೆ.
BMRCL ನಮ್ಮ ಮೆಟ್ರೋ ಹಳದಿ ಮಾರ್ಗವಾದ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಈ ರೈಲು ಓಡಿಸಲು ಯೋಜನೆ ರೂಪಿಸಿದೆ.
ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಬೋಗಿ ಚೀನಾದಿಂದ ಕಳೆದ ವಾರ ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಕಸ್ಟಮ್ಸ್ ಸೇರಿದಂತೆ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ರಸ್ತೆ ಮಾರ್ಗವಾಗಿ ರೈಲು ಬೋಗಿಗಳನ್ನು ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭವಾಗಿತ್ತು.
ಒಟ್ಟು ಮೂರು ಲಾರಿಗಳಲ್ಲಿ 6 ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳು ಬುಧವಾರ ಮುಂಜಾನೆ 3.30ಕ್ಕೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೆಟ್ರೋ ಮಾಹಿತಿ ನೀಡಿದೆ, ಚಿತ್ರಗಳಲ್ಲಿ ಸಹ ಪೋಸ್ಟ್ ಮಾಡಿದೆ.
ಯಾವ ಮಾರ್ಗದಲ್ಲಿ ಸಂಚಾರ?
BMRCL ಚಾಲಕ ರಹಿತ ನಮ್ಮ ಮೆಟ್ರೋ ರೈಲನ್ನು ಹಳದಿ ಮಾರ್ಗವಾದ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಓಡಿಸಲು ನಿರ್ಧರಿಸಿದೆ. ಈ ಮಾರ್ಗದ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿದೆ. ಸುಮಾರು 19 ಕಿ. ಮೀ. ಮಾರ್ಗವಾದ ಇದು ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುತ್ತದೆ. ನಗರದ ಟೆಕ್ಕಿಗಳ ಸಂಚಾರಕ್ಕೆ ಅನುಕೂಲವಾಗುವ ಈ ಮಾರ್ಗದಲ್ಲಿ ಸುಮಾರು 2 ತಿಂಗಳ ಕಾಲ ಚಾಲರ ರಹಿತ ನಮ್ಮ ಮೆಟ್ರೋ ಬೋಗಿಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ.
ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರ ಒಪ್ಪಿಗೆಯನ್ನು ಪಡೆದು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ಅಂತ್ಯ ಅಥವ ಜುಲೈನಲ್ಲಿ ಹಳದಿ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗ ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗಗಳಲ್ಲಿ ಒಂದಾಗಿದೆ.