Wednesday, December 18, 2024

ಪ್ರಸ್ತುತ ಸಾಮಾಜಿಕ‌ ಸಮಸ್ಯೆಗಳಿಗೆ ಪರಿಹಾರ ಕೊಡುವ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ : ಸಿಎಂ

ಬೆಂಗಳೂರು : ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿರುವ ಹೊತ್ತಲ್ಲಿ, ಈ ಅನಾಹುತಗಳನ್ನು ತಡೆಯುವ ಪರಿಣಾಮಕಾರಿ ಘೋಷಣೆ-ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲಿ ಆಗಿರುವ ಅಭಿವೃದ್ಧಿಯಲ್ಲಿ, ಜಾರಿ ಆಗಿರುವ ಸಾಮಾಜಿಕ ಭದ್ರತೆ, ಆಹಾರ ಭದ್ರತೆ ಕಾರ್ಯಕ್ರಮಗಳಲ್ಲಿ ಬಹುತೇಕ ಎಲ್ಲವೂ ಕಾಂಗ್ರೆಸ್ ಅವಧಿಯವು. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆಗಳು ಜಾರಿ ಆದವು ಎಂದು ಸಿಎಂ ಪಟ್ಟಿ ಮಾಡಿದರು.

ಇದನ್ನೂ ಓದಿ: ಮಹಾಶಿವರಾತ್ರಿ ಪ್ರಯುಕ್ತ ಹಳ್ಳಿಕಾರ್ ಹಸುಗಳ ಸೌಂದರ್ಯ ಸ್ಪರ್ಧೆ!

ದೇಶದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವಾಗ್ದಾನಗಳನ್ನು ಕೊಡಬೇಕು ಮತ್ತು ಅವುಗಳನ್ನು ಈಡೇರಿಸಬೇಕು. ಜನರ ವಿಶ್ವಾಸ ಉಳಿಸಿಕೊಳ್ಳುವಂತಹ ವಾಗ್ದಾನಗಳನ್ನು ನಾವು ನೀಡಬೇಕು ಎನ್ನುವುದು ಕಾಂಗ್ರೆಸ್ ಬದ್ಧತೆ. 2013 ರಲ್ಲಿ ನೀಡಿದ್ದ ವಾಗ್ದಾನಗಳನ್ನು ನಮ್ಮ ಸರ್ಕಾರ ಶೇ98 ರಷ್ಟು ಈಡೇರಿಸಿದೆ. 2024 ರಲ್ಲೂ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಉಳಿದ ಭರವಸೆಗಳನ್ನು ಯಶಸ್ವಿಯಾಗಿ ಜಾರಿ ಮಾಡುತ್ತಿದ್ದೇವೆ ಎಂದರು.

ಈ ವೇಳೆ ಎಐಸಿಸಿ ಮುಖಂಡರೂ, ಪ್ರಣಾಳಿಕೆ ಸಮಿತಿ ಸದಸ್ಯರೂ ಆದ ರಾಜಾ, ನೀತಿ ಆಯೋಗದ ಉಪಾಧ್ಯಕ್ಷರಾದ ರಾಜೀವ್ ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಣಾಳಿಕೆ ಸಮಿತಿ ಮುಖ್ಯಸ್ಥರಾದ ಮೆಹರೂಜ್ ಖಾನ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.‌

RELATED ARTICLES

Related Articles

TRENDING ARTICLES