ನವದೆಹಲಿ : ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಕರ್ನಾಟಕದ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಕಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ನಾಯಕರು ಹತಾಶೆಗೊಂಡಿದ್ದಾರೆ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಉತ್ತರ ಕೊಡಲಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದೆ. ಭರವಸೆ ಈಡೇರಿಸಿವಲ್ಲಿ ವಿಫಲವಾಗಿದೆ. ಲೋಪದೋಷ ಮುಚ್ಚಿ ಹಾಕಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸಿಎಂ ಸ್ಥಾನಕ್ಕೆ ಗೌರವ ತರುವುದಲ್ಲ ಎಂದು ಛೇಡಿಸಿದರು.
ರಾಜ್ಯದ ಗೌರವ ಹಾಳು ಮಾಡುತ್ತಿದ್ದಾರೆ
ಹಣಕಾಸು ಸಚಿವರು ಕಾಂಗ್ರೆಸ್ ಪಕ್ಷದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಎಷ್ಟು ಅನುದಾನ ನೀಡಿದ್ದಾರೆ. ರಾಜ್ಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ದೇಶದ ಎಲ್ಲ ರಾಜ್ಯಗಳಿಗೂ ವಿಶೇಷ ಅನುದಾನ ಬಂದ್ ಮಾಡಿದೆ. ವಿಶೇಷ ಅನುದಾನ ಐದು ವರ್ಷಕ್ಕೆ ಸೀಮಿತವಾಗಿತ್ತು. ಅರ್ಧ ಸತ್ಯವನ್ನು ಹೇಳುವ ಕೆಲಸ ಮಾಡುತ್ತಿದ್ದಾರೆ. ಅಸತ್ಯ ನುಡಿದು ರಾಜ್ಯದ ಗೌರವ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಒಂದು ಸುಳ್ಳನ್ನು ನೂರು ಬಾರಿ ಹೇಳ್ತಿದ್ದಾರೆ
ಕೇಂದ್ರದ ಜೊತೆಗಿನ ಸಂಬಂಧ ಹಾಳು ಮಾಡುತ್ತಿದ್ದಾರೆ. ಸಿಎಂ ಆರುವರೆ ಕೋಟಿ ಜನರ ಪ್ರತಿನಿಧಿ, ಅದನ್ನು ಅವರು ಮರೆಬಾರದು. ಹಣಕಾಸು ಸಚಿವರು ಸುಳ್ಳು ಹೇಳ್ತಿದ್ದಾರೆಯೇ..? ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಅವರಿಗೆ ಅಸ್ತಿತ್ವ ಇಲ್ಲ, ಅದಕ್ಕಾಗಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನರ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.