ಬೆಂಗಳೂರು : ಕಬ್ಬನ್ ಪಾರ್ಕ್ ಬೆಂಗಳೂರಿಗರ ಫೇವರಿಟ್ ಉದ್ಯಾನವನಗಳಲ್ಲಿ ಒಂದು. ಕಬ್ಬನ್ ಪಾರ್ಕ್ ಪ್ರೇಮಿಗಳನ್ನ ಇನ್ನಷ್ಟು ಸೆಳೆಯಲು ಇದೀಗ ಹೊಸ ಪ್ಲಾನ್ಗೆ ರೆಡಿಯಾಗುತ್ತಿದೆ.
ಹೌದು, ಕಬ್ಬನ್ ಪಾರ್ಕ್ಗೆ ಮತ್ತಷ್ಟು ಪುಷ್ಟಿ ನೀಡಲು 2 ಅಂತಸ್ತಿನಲ್ಲಿ ಅತಿ ದೊಡ್ಡ ಅಕ್ಟೇರಿಯಂ ರೆಡಿಯಾಗಿದೆ. ಹಾಗಿದ್ರೆ, ಅಕ್ವೇರಿಯಂ ವಿಶೇಷತೆ ಏನು? ಎಂಟ್ರಿ ಶುಲ್ಕ ಎಷ್ಟು? ಇಲ್ಲಿದೆ ನೋಡಿ ಮಾಹಿತಿ.
ಕಬ್ಬನ್ ಪಾರ್ಕ್ ಅಕ್ವೇರಿಯಂ ವಿಲಕ್ಷಣ ಮೀನುಗಳನ್ನು ಹೊಂದಿರುವ ಅಕ್ವೇರಿಯಂ ಆಗಿದೆ. ಒಂದು ದಿನ ವಿಹಾರಕ್ಕೆ ಸೂಕ್ತವಾದ ಸ್ಥಳ. ಇಲ್ಲಿ ಕಾಣಸಿಗುವ ವಿಲಕ್ಷಣ ಮತ್ತು ಅಲಂಕಾರಿಕವಾಗಿರುವ ವರ್ಣರಂಜಿತ ಮೀನುಗಳನ್ನು ಮಕ್ಕಳಿಂದಿಡಿದು ಹಿರಿಯರ ವರೆಗೆ ಎಲ್ಲರೂ ಇಷ್ಟಪಡುತ್ತಾರೆ.
ಕಬ್ಬನ್ ಪಾರ್ಕ್ ಆವರಣದಲ್ಲಿ ಹೊಸ ರೂಪದೊಂದಿಗೆ ಮತ್ಸ್ಯಾಲಯ ಕಂಗೊಳಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಮ್ಮ ಬೆಂಗಳೂರು ಅಕ್ವೇರಿಯಂ ಎಂಬ ಖಾಸಗಿ ಸಂಸ್ಥೆ ಹಳೆಯ ಮತ್ಸ್ಯಾಲಯಕ್ಕೆ ಆಧುನಿಕ ಸ್ಪರ್ಶ ನೀಡಿದೆ. ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ತಿಂಗಳಾಂತ್ಯದಲ್ಲಿ ಉದ್ಘಾಟನೆಗೊಳ್ಳಲಿದೆ.
ಒಂದು ಗಂಟೆಗೆ 300 ರೂ. ನಿಗದಿ
ಇನ್ನು 1983ರಲ್ಲಿ ಈ ಮತ್ಸ್ಯಾಲಯವನ್ನು 17,500 ಚದರಡಿಯಲ್ಲಿ ನಿರ್ಮಿಸಲಾಗಿತ್ತು. ಸದ್ಯ ಇದನ್ನು ಪಿಪಿಪಿ ಯೋಜನೆಯ ಅಡಿಯಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. 2 ಅಂತಸ್ತಿನ ಮತ್ಯಾಲಯದ ಹಳೆಯ ಕಟ್ಟಡದ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಂಡು ಅಭಿವೃದ್ಧಿ ಮಾಡಲಾಗಿದೆ. ಎಂಟ್ರಿ ಟಿಕೆಟ್ನ್ನು ಒಂದು ಗಂಟೆಗೆ 300 ರೂ. ನಿಗದಿ ಪಡಿಸಲಾಗಿದೆ.
75 ಸಾವಿರ ಲೀಟರ್ ಸಾಮರ್ಥ್ಯ ಟನಲ್
ವಿಶೇಷವೆಂದರೆ ಕಟ್ಟಡದ ಆವರಣದಲ್ಲಿ 75 ಸಾವಿರ ಲೀಟರ್ ಸಾಮರ್ಥ್ಯದ ಉಪ್ಪು ನೀರಿನ ಅಂತರರಾಷ್ಟ್ರೀಯ ಮಟ್ಟದ ಟನಲ್ ನಿರ್ಮಿಸಲಾಗಿದೆ. ಇದರ ಜೊತೆಗೆ ಮತ್ಸ್ಯಾಲಯ ಒಳಹೊಕ್ಕುವವರಿಗೆ ಸಮುದ್ರದ ಆಳದಲ್ಲಿದ್ದಂತೆ ಅನುಭವವಾಗಲಿದೆ. ಅದರಲ್ಲೂ ಮಕ್ಕಳಿಗೆ ಇದು ಫೇವರೇಟ್ ಸ್ಪಾಟ್ ಆಗಲಿದೆ.
ಒಟ್ಟಾರೆ, ಕಬ್ಬನ್ ಪಾರ್ಕ್ ಪ್ರೇಮಿಗಳನ್ನು ಸೆಳೆಯಲು ಈ ಅಕ್ವೇರಿಯಂ ಸಿಂಗಾರಗೊಳ್ಳುತ್ತಿದೆ. ವಾಕಿಂಗ್ ಸ್ಪಾಟ್, ಮಕ್ಕಳ ಬಾಲಭವನದ ಜತೆ ಅಕ್ವೇರಿಯಂ ಕೂಡ ಇದೀಗ ಸೇರ್ಪಡೆ ಆಗಿದೆ. ಮುಂದಿನ ದಿನಗಳಲ್ಲಿ ಜನರ ರೆಸ್ಪಾನ್ಸ್ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.