Thursday, September 19, 2024

ಸಿದ್ದರಾಮಯ್ಯ ಸರ್ಕಾರದ ಮಾತುಗಳು ಕುಚೇಷ್ಟೆಯಿಂದ ಕೂಡಿವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!

ನವದೆಹಲಿ: ಕೇಂದ್ರ ಬಜೆಟ್​ನಲ್ಲಿ ಕರ್ನಾಟಕದ ತೆರಿಗೆಯ ಪಾಲು ನೀಡುವಲ್ಲಿ ಕೇಂದ್ರ ರಾಜ್ಯದ ಜನತೆಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್​ ಪಕ್ಷದ ಮುಖಂಡರು ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್ ಪಕ್ಷ ಮಾಡಿರುವ ಆರೋಪಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸ್ಪಷ್ಟೀಕರಣ ನೀಡಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ನೀಡಬೇಕಾದ ಜಿಎಸ್​ಟಿಯ ಒಂದು ನಯಾಪೈಸೆಯನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿಲ್ಲ, ಕರ್ನಾಟಕದ ಜನತೆ ಇದರ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ, ಬದಲಿಗೆ ಕಾಂಗ್ರೆಸ್​ ನೇತೃತ್ವದ ಪಕ್ಷ ಮಾತ್ರ ಈ ಪ್ರಶ್ನೆಯನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಗಳಿಗೆ ಅವರು ತಿರುಗೇಟು ನೀಡಿದರು.

ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಎಂಬುದು ತಪ್ಪು ಮಾಹಿತಿ, ಕಾಂಗ್ರೆಸ್ ನಾಯಕರ ಹೇಳಿಕಗಳು ಕುಚೇಷ್ಟೆಯಿಂದ ಕೂಡಿದೆ. ವಾಸ್ತವಿಕ ಅಂಶಗಳನ್ನು ಹೇಳದೆ ವಿತ್ತೀಯ ಹಕ್ಕುಗಳ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದರು.

15 ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ ಆದ ಲಾಭಗಳನ್ನು ಉಲ್ಲೇಖಿಸಿಲ್ಲ, ಕೆಲವು ಕಾಲ್ಪನಿಕ ನಷ್ಟಗಳನ್ನು ಮಾತ್ರ ಹೇಳುತ್ತಿದ್ದಾರೆ, ಕೇಂದ್ರ ಹಂಚುವ ಪ್ರತಿ ರಾಜ್ಯದ ಪಾಲು ಆಯೋಗದಿಂದ ಆಯೋಗಕ್ಕೆ ವ್ಯತ್ಯಾಸವಾಗುತ್ತದೆ. ರಾಜ್ಯಗಳ ಮೇಲೆ ಬೀರುವ ಎಲ್ಲಾ ಅಂಶಗಳನ್ನು ಪರಿಗಣಿಸಿ ಆಯೋಗ ಶಿಫಾರಸ್ಸುಗಳನ್ನು ಮಾಡುತ್ತದೆ.

14ನೇ ಆಯೋಗದ ಐದು ವರ್ಷಗಳ ನಿಗದಿತ ಅವಧಿಯಲ್ಲಿ ಕರ್ನಾಟಕವು ₹1,51,309 ಕೋಟಿಗಳನ್ನು ತೆರಿಗೆ ಹಂಚಿಕೆ ಪಡೆದಿದೆ. ಪ್ರಸ್ತುತ 15 ನೇ ಹಣಕಾಸು ಅವಧಿಯ ಮೊದಲ ನಾಲ್ಕು ವರ್ಷಗಳಲ್ಲಿ, ಅಂದರೆ ಮಾರ್ಚ್, 2024 ರ ವೇಳೆಗೆ ಕರ್ನಾಟಕವು ಈಗಾಗಲೇ ₹1,29,854 ಕೋಟಿಗಳನ್ನು ಸ್ವೀಕರಿಸಿದೆ. ಭಾರತ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ₹ 44,485 ಕೋಟಿಗಳನ್ನು ಮತ್ತಷ್ಟು ಬಿಡುಗಡೆ ಮಾಡಲು ಯೋಜಿಸಿದೆ. ಹಣಕಾಸು ವರ್ಷ 2024-25 ಸೇರಿ ಐದು ವರ್ಷಗಳಲ್ಲಿ ಒಟ್ಟು ₹ 1,74,339 ಕೋಟಿಗಳನ್ನು ಕರ್ನಾಟಕ ಪಡೆದಂತಾಗಲಿದೆ. ಕರ್ನಾಟಕವು 14ನೇ ಆಯೋಗದ ಅವಧಿಗಿಂತ 15ನೇ ಅವಧಿಯ ಮೊದಲ ಐದು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚು ಮೊತ್ತವನ್ನು ಪಡೆದಿದೆ. ತನ್ನ ನಷ್ಟದ ಸುಳ್ಳು ಹೇಳಿಕೆಯನ್ನು ಬಲಗೊಳಿಸಲು‌ ಕಾಂಗ್ರೆಸ್ ಸರಕಾರ ಯತ್ನಿಸುತ್ತಿದೆ ಎಂದರು.

RELATED ARTICLES

Related Articles

TRENDING ARTICLES