ಮಂಡ್ಯ : ಸಂಸದೆ ಸುಮಲತಾ ಅವರಿಗೆ ರಾಜ್ಯದ ಬಗ್ಗೆ ಕಾಳಜಿ ಇದ್ರೆ ಬರಲಿ. ಸ್ವಾಭಿಮಾನಿ ಸಂಸದೆ ಆಗಿದ್ರೆ, ನಮಗಿಂತ ಮೊದಲೇ ಪ್ರತಿಭಟನೆಯಲ್ಲಿ ಇರಬೇಕು ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಅವರಿಗೆ ಏನು ಹಕ್ಕಿದೆ ಎಂದು ನಮ್ಮ ಪ್ರತಿಭಟನೆ ವಿರೋಧ ಮಾಡ್ತಾರೆ. ಅವರನ್ನು ಕೇಳಿಕೊಂಡು ನಾವು ನಮ್ಮ ಹಕ್ಕನ್ನು ಕೇಳಬೇಕಾ? ಎಂದು ಕುಟುಕಿದರು.
ಬಿಜೆಪಿ ಅವರು ನಮ್ಮ ಯಜಮಾನರಾ..? ನಮ್ಮ ಯಜಮಾನರು ರಾಜ್ಯದ ಜನರು. ಜನರು ಹೇಳಿದ್ದನ್ನು ನಾವು ಕೇಳಬೇಕು, ಬಿಜೆಪಿ ಹಾಗೂ ಜೆಡಿಎಸ್ ಹೇಳಿದ್ದು ಅಲ್ಲ. ನಾವು ಹೋಗ್ತಾ ಇರೋದು, ನಮಗೆ ಬರ ಪರಿಹಾರ ನೀಡದೇ ಇರೋದಕ್ಕೆ ಪ್ರತಿಭಟನೆ ಮಾಡಲು. ಕರ್ನಾಟಕಕ್ಕೆ ಆರ್ಥಿಕ ಸಹಕಾರವನ್ನು ನೀಡ್ತಾ ಇಲ್ಲ ಎಂದು ಹೋರಾಟ ಮಾಡ್ತಾ ಇದೀವಿ ಎಂದು ತಿಳಿಸಿದರು.
5 ವರ್ಷವೂ ಗ್ಯಾರಂಟಿ ಕೊಡುತ್ತೇವೆ
ನಾಚಿಕೆ ಇದ್ದರೆ ಬಿಜೆಪಿ ಅವರು ರಾಜಕೀಯ ಹೊರತುಪಡಿಸಿ ಮಾತನಾಡಲಿ. ಅವರಿಗೆ ಅವರ ನಾಯಕರ ಬಗ್ಗೆ ಭಯ ಇದೆ, ಅದಕ್ಕೆ ಮಾತಾಡುತ್ತಾ ಇಲ್ಲ. ಬಿಜೆಪಿ ಬಿಡುಗಡೆ ಮಾಡಿರೋ ದಾಖಲೆ 100% ಸುಳ್ಳು. ನಮ್ಮನ್ನ ಶ್ವೇತಪತ್ರ ಹೊರಡಿಸಿ ಎಂದು ಹೇಳಲು ಅವರು ಯಾರು..? ಮುಂದೆ ಚುನಾವಣೆ ಇದೆ ಜನರು ಅವರಿಗೆ ಬುದ್ಧಿ ಕಲಿಸುತ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು 5 ವರ್ಷವೂ ಕೊಡುತ್ತೇವೆ ಎಂದು ಹೇಳಿದರು.
ಬಿಜೆಪಿ ಸಂಸದರಿಗೆ ಬರೋಕೆ ತಾಕತ್ ಇದ್ಯಾ?
ಕೇಂದ್ರ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡ್ತಾ ಇದೀವಿ. ಬಿಜೆಪಿ ಸಂಸದರಿಗೆ ಬರೋಕೆ ತಾಕತ್ ಇದ್ಯಾ..? ಮೋದಿ ಅವರ ಬಳಿ ಏನು ಕೇಳೋಕೆ ಅವರಿಗೆ ಆಗಲ್ಲ, ಇನ್ನು ಪ್ರತಿಭಟನೆಗೆ ಬರ್ತಾರಾ..? ಅವರು ಪ್ರತಿಭಟನೆಗೆ ಬಂದ್ರೆ ಸಂತೋಷ. ನಮ್ಮ ಜೊತೆ ಬರದೇ, ಅವರೇ ಹೋಗಿ ಸತ್ಯಾಗ್ರಹ ಮಾಡ್ತೀವಿ ಎಂದು ಕೂತರು ಸಂತೋಷ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.