Wednesday, October 30, 2024

ಶಾಮನೂರು ರಾಘವೇಂದ್ರರನ್ನು ದಾವಣಗೆರೆಯಲ್ಲಿ ನಿಲ್ಲಿಸಿ, ಗೆಲ್ಲಿಸಿಕೊಳ್ಳಲಿ : ಆಯನೂರು ವ್ಯಂಗ್ಯ

ಶಿವಮೊಗ್ಗ : ಶಾಮನೂರು ಶಿವಶಂಕರಪ್ಪನವರು ಸಂಸದ ಬಿ.ವೈ. ರಾಘವೇಂದ್ರ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಿಲ್ಲಿಸಿ ಗೆಲ್ಲಿಸಿಕೊಳ್ಳಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ. 

ಇತ್ತೀಚೆಗೆ ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ನಡೆದ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು, ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಸಿದ್ದಾರೆ. ರಾಘವೇಂದ್ರ ಅವರನ್ನು ಗೆಲ್ಲಿಸಿ, ತಮ್ಮ ಕ್ಷೇತ್ರದಲ್ಲಿ ಹೆಚ್ಚು ಕೆಲಸವನ್ನು ಅಭಿವೃದ್ಧಿಯನ್ನು ಮಾಡಿಸಿಕೊಳ್ಳಲಿ ಎಂದು ಕುಟುಕಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ತುಂಬ ಚಾಣಾಕ್ಷ ರಾಜಕಾರಣಿ, ಹಿರಿಯರು ಅವರ ಬಗ್ಗೆ ಅಪಾರ ಗೌರವವಿದೆ. ನಾವಿಬ್ಬರು ಒಟ್ಟಿಗೆ ಲೋಕಸಭೆಗೆ ಪ್ರವೇಶ ಪಡೆದಿದ್ದೆವು. ಸಂದರ್ಭವನ್ನು ನೋಡಿಕೊಂಡು ಮಾತನಾಡಿದ್ದಾರೆ. ಅವರಿಂದ ಅಚಾತುರ್ಯವಾಗಿದೆ ನಿಜ. ಮತ್ತೊಂದು ರೀತಿಯಲ್ಲಿ ಕಾಂಗ್ರೆಸ್‍ಗೆ ಲಾಭವು ಆಗಿದೆ. ಅವರ ಹೇಳಿಕೆಯಿಂದ ವೀರಶೈವರಲ್ಲದ ಹಿಂದುಳಿದ ವರ್ಗಗಳು ಜಾಗೃತಗೊಂಡಿವೆ. ಇದು ಕಾಂಗ್ರೆಸ್‍ಗೆ ಲಾಭವು ಆಗುತ್ತದೆ. ಬಹುಶಃ ಇದನ್ನು ಗಮನದಲ್ಲಿಟ್ಟುಕೊಂಡು ಶಾಮನೂರು ಅವರು ಬಿಜೆಪಿಗೆ ಒಳಹೊಡೆತ ಹೊಡಿದ್ದಿದ್ದಾರೆ ಎಂದು ಹೇಳಿದ್ದಾರೆ.

ಪ್ರೇತಾತ್ಮಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ

ನಿಮ್ಮ ಬಗ್ಗೆ ಕಾಂಗ್ರೆಸ್‍ನವರೇ ದೂರು ಕೊಟ್ಟಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರೇತಾತ್ಮಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ. ಅವರು ನಿಜವಾಗಿಯೂ ದೂರು ಕೊಡಬೇಕಾದದ್ದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳಿದ ಹಿರಿಯರಿಗೆ. ಅವರಿಗೆ ಉತ್ತರ ಕೊಡಲು ಅಥವಾ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ಕೊಡಲು ಇವರಿಗೆ ತಾಕತ್ತಿಲ್ಲ. ನನ್ನ ಬಗ್ಗೆ ದೂರು ಕೊಡಲು ಹೋಗಿದ್ದಾರೆ. ಅವರಿಗೆ ಅವಮಾನ ಮಾಡುವಂತಹ ಮಾತನ್ನು ನಾನು ಆಡಿಲ್ಲ. ಹೈಕಮಾಂಡ್ ನನಗೆ ನೋಟಿಸ್ ಕೊಟ್ಟರೆ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಮಹಾನುಭವರು ಬಾಯಿಯೇ ಬಿಡಲಿಲ್ಲ

ಬೆಕ್ಕಿನಕಲ್ಮಠದ ಸಮಾರಂಭದಲ್ಲಿಯೇ ಅಧ್ಯಕ್ಷತೆ ವಹಿಸಿದ್ದ ಈ ಮಹಾನುಭವರು ಕೊನೆ ಪಕ್ಷ ಶಾಮನೂರು ಹೇಳಿಕೆಯನ್ನು ಅಲ್ಲಿಯೇ ಹೇಳಿ ಉತ್ತರ ನೀಡಬಹುದಿತ್ತು. ನಂತರವಾದರೂ ಉತ್ತರ ನೀಡಬಹುದಿತ್ತು. ಅವರು ಬಾಯಿಯೇ ಬಿಡಲಿಲ್ಲ. ಒಟ್ಟಾರೆ ಅವರ ಹೇಳಿಕೆಯೊಂದು ಸಣ್ಣ ಅಚಾತುರ್ಯವಾಗಿದೆ. ಇದರಿಂದ ಕಾಂಗ್ರೆಸ್‍ಗೆ ಲಾಭವಾಗಿದೆ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES