Wednesday, October 23, 2024

ಹನುಮಧ್ವಜ ತೆರವು : ಮಂಡ್ಯ ಜಿಲ್ಲೆಗೆ ಕಪ್ಪು ಚುಕ್ಕಿ ತರಬೇಡಿ : ಸುಮಲತಾ ಎಚ್ಚರಿಕೆ

ಮಂಡ್ಯ : ಕೆರಗೋಡು ಗ್ರಾಮದಲ್ಲಿ ಪೊಲೀಸರು ಹನುಮಧ್ವಜ ತೆರವುಗೊಳಿಸಿರುವ ವಿಚಾರ ಸಂಬಂಧ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಂಡ್ಯ ಜಿಲ್ಲೆಗೆ ಕಪ್ಪು ಚುಕ್ಕಿ ತರದಂತೆ ಆಡಳಿತ ವ್ಯವಸ್ಥೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

ಏಕಾಏಕಿ ಹನುಮಧ್ವಜ ಕೆಳಗಿಳಿಸಿ, ರಾಮನ ಬ್ಯಾನರ್ ಕಿತ್ತು ಹಾಕಿರುವುದು ಸರಿಯಾದ ಕ್ರಮವಲ್ಲ. ಜಿಲ್ಲಾಡಳಿತ ಅಥವಾ ಸ್ಥಳೀಯ ಅಧಿಕಾರಿಗಳು ಊರಿನ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ಸಲಹೆ ನೀಡಬೇಕಿತ್ತು. ಯಾವುದಕ್ಕಾಗಿ ಅನುಮತಿ ನೀಡಲಾಗಿದೆ ಎನ್ನುವ ಅರಿವು ನೀಡಬೇಕಿತ್ತು. ಆದರೆ, ಬಲವಂತದ ಕ್ರಮ ತೆಗೆದುಕೊಂಡು ಜಾತಿ, ಧರ್ಮಗಳ ನಡುವೆ ಕಿತ್ತಾಟ ನಡೆಯುವಂತಹ ವಾತಾವರಣ ಸೃಷ್ಟಿ ಮಾಡಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.

ನನಗೆ ಅತ್ಯಂತ ನೋವು ತಂದಿದೆ

ಕೆರೆಗೋಡು ಗ್ರಾಮದ ಶ್ರೀ ಗೌರಿ ಶಂಕರ್ ಸೇವಾ ಟ್ರಸ್ಟ್ ಮೂರು ದಶಕಗಳಿಂದ ಧಾರ್ಮಿಕ, ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದೆ. ಈ ಬಾರಿ 108 ಅಡಿ ಧ್ವಜ ಸ್ಥಂಬ ನಿರ್ಮಿಸಿ ಹನುಮಧ್ವಜ ಹಾರಿಸಿದೆ. ಇದೀಗ ವಿವಾದವಾಗಿ ಏರ್ಪಟ್ಟಿರುವುದು ಅತ್ಯಂತ ನೋವು ತಂದಿದೆ ಎಂದು ಬೇಸರಿಸಿದ್ದಾರೆ.

ಸಂಭ್ರಮವನ್ನು ತಡೆಯುವ ಪ್ರಯತ್ನ ನಡೆದಿದೆ

ಸೇವಾ ಟ್ರಸ್ಟ್ ಹಾಗೂ ಊರಿನ ಮುಖಂಡರು ಈವರೆಗೂ ಯಾವುದೇ ಜಾತಿ, ಧರ್ಮ ಲೆಕ್ಕಿಸದೇ ಇಂತಹ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಬಾರಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗಿರುವುದರಿಂದ ಆ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಹೊರಟಿದ್ದರು. ಆದರೆ, ರಾಜಕೀಯ ಕಾರಣಕ್ಕಾಗಿ ಈ ಸಂಭ್ರಮವನ್ನು ತಡೆಯುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

ಜನರ ಭಾವನೆಗಳಿಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕು

ಊರಿನ ಮುಖಂಡರ ಜೊತೆ ಅಧಿಕಾರಿಗಳು ಮಾತನಾಡಿ, ಅಲ್ಲಿ ಜರೂರಾಗಿ ಶಾಂತಿ ನೆಲೆಸುವಂತ ಮಾಡಿ. ಧಾರ್ಮಿಕ ಆಚರಣೆಗೆ ಅನುವು ಮಾಡಿಕೊಟ್ಟು ಸೌಹಾರ್ದಕ್ಕೆ ಹೆಸರಾಗಿರುವ ಮಂಡ್ಯ ಜಿಲ್ಲೆಗೆ ಕಪ್ಪು ಚುಕ್ಕಿ ತರದಂತೆ ಆಡಳಿತ ವ್ಯವಸ್ಥೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡುವೆ. ಈ ಸಮಯದಲ್ಲಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು, ಜನರ ಭಾವನೆಗಳಿಗೆ ಧಕ್ಕೆ ತರದಂತೆ, ಅವಮಾನಿಸದಂತೆ ಜಿಲ್ಲಾ ಆಡಳಿತ ಮತ್ತು ಜನಪ್ರತಿನಿಧಿಗಳು ನಡೆದುಕೊಳ್ಳಬೇಕು ಎಂದು ಸಂಸದೆ ಸುಮಲತಾ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES