ನವದೆಹಲಿ: ಮೋದಿ ಮತ್ತೆ ಪ್ರಧಾನಿಯಾಗಬೇಕು ಅದಕ್ಕಾಗಿ ಮರಳಿ ಬಿಜೆಪಿಗೆ ಬಂದಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿ ಮಾತನಾಡಿದ ಅವರು, “ವಿಧಾನಸಭಾ ಚುನಾವಣೆ ವೇಳೆ ಕೆಲವು ಕಾರಣಗಳಿಗಾಗಿ ಬಿಜೆಪಿ ತೊರೆದಿದ್ದೆ. ಮತ್ತೆ ನಮ್ಮ ನಾಯಕರು ಮರಳಿ ಪಕ್ಷಕ್ಕೆ ಬಾ ಎಂದು ವಿನಂತಿಸಿಕೊಂಡರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮರಳಿ ಪಕ್ಷಕ್ಕೆ ಬಂದಿರುವೆ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಹೀಗಾಗಿ ಪಕ್ಷಕ್ಕೆ ಮತ್ತೆ ದುಡಿಯುತ್ತೇನೆ” ಎಂದರು.
ಇದನ್ನೂ ಓದಿ: ಶೆಟ್ಟರ್ ಬೈದಷ್ಟು ಬಿಜೆಪಿಗೆ ಕಾಂಗ್ರೆಸ್ನವರೇ ಬೈದಿಲ್ಲ: ಸಚಿವ ಜಮೀರ್ ಅಹ್ಮದ್
“ಕಾಂಗ್ರೆಸ್ ನಾಯಕಾರದ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೆನ್ನಾಗಿ ತಮ್ಮ ಪಕ್ಷದಲ್ಲಿ ನಡೆಸಿಕೊಂಡಿದ್ದಾರೆ. ಅವರಿಗೆ ಈ ಮೂಲಕ ಧನ್ಯವಾದ ತಿಳಿಸುತ್ತೇನೆ. ಅಮಿತ್ ಶಾ ಅವರು ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಲೋಕಸಭೆಯಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕು” ಎಂದು ಹೇಳಿದರು.
“ಈಗಾಗಲೇ ಇ-ಮೇಲ್ ಮೂಲಕ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಕಳುಹಿಸಿದ್ದೇನೆ. ಕಾಂಗ್ರೆಸ್‌ನ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದೇನೆ” ಎಂದರು.
ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ಲಿಂಗಾಯತ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಲೋಕಸಭಾ ಚುನಾವಣೆಗೂ ಮುನ್ನವೇ ಮರಳಿ ಮಾತೃ ಪಕ್ಷ ಬಿಜೆಪಿಗೆ ಮರಳಿದ್ದಾರೆ.